×
Ad

ಪಾಕ್ ಬೇಹುಗಾರಿಕೆ ಜಾಲ: ಇನ್ನೋರ್ವನ ಸೆರೆ

Update: 2017-02-19 23:58 IST

ಹೊಸದಿಲ್ಲಿ, ಫೆ.19: ಭಾರತೀಯ ಮಿಲಿಟರಿ ಕಾರ್ಯಾಚರಣೆ ಗಳ ಬೇಹುಗಾರಿಕೆ ನಡೆಸಲು ಅಂತಾರಾಷ್ಟ್ರೀಯ ಕರೆಗಳನ್ನು ಬಳಸುತ್ತಿದ್ದ ಪಾಕಿಸ್ತಾನಿ ಬೇಹುಗಾರಿಕೆ ಜಾಲದ ಮುಖ್ಯ ಕೊಂಡಿಯೆನ್ನಲಾಗಿರುವ ವ್ಯಕ್ತಿಯನ್ನು ಇಲ್ಲಿ ಬಂಧಿಸಲಾಗಿದೆ.

ಶನಿವಾರ ತಡರಾತ್ರಿ ದಿಲ್ಲಿ ಪೊಲೀಸ್ ಮತ್ತು ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜಾಮಾ ಮಸೀದಿ ಪ್ರದೇಶದ ನಿವಾಸಿ ಜಬ್ಬಾರ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿದೆ.
ಜಬ್ಬಾರ್ ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿಯ ಐಎಸ್‌ಐ ಏಜಂಟ್‌ಗಳಿಗೆ ಮುಖ್ಯ ಸಂಪರ್ಕ ಕೊಂಡಿಯಾಗಿದ್ದ. ಮಧ್ಯಪ್ರದೇಶದ ರೇವಾ ಮತ್ತು ಸತ್ನಾ ಜಿಲ್ಲೆಗಳಲ್ಲಿಯ ಬ್ಯಾಂಕುಗಳಲ್ಲಿ ಜಮಾ ಅಗುತ್ತಿದ್ದ ನಕಲಿ ಲಾಟರಿ ಮತ್ತು ಆನ್‌ಲೈನ್ ವಂಚನೆ ಗಳಿಕೆ ಹಣವನ್ನು ತನ್ನ ವಾಹಕರು ಮತ್ತು ಹವಾಲಾ ಜಾಲದ ಮೂಲಕ ಜಮ್ಮು-ಕಾಶ್ಮೀರದಲ್ಲಿನ ಐಎಸ್‌ಐ ಏಜೆಂಟ್‌ಗಳಿಗೆ ತಲುಪಿಸುತ್ತಿದ್ದ ಎನ್ನುವುದು ಆತನ ವಿಚಾರಣೆ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಇಬ್ಬರು ಐಎಸ್‌ಐ ಏಜಂಟ್‌ಗಳಾದ ಸತ್ವಿಂದರ್ ಮತ್ತು ದಾದು ಅವರು ಜಮ್ಮುವಿನಲ್ಲಿ ಬಂಧಿಸಲ್ಪಟ್ಟಾಗ ಪಾಕ್ ಬೇಹುಗಾರಿಕೆ ಜಾಲ ಬಹಿರಂಗಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಆಡಳಿತ ಬಿಜೆಪಿ ನಾಯಕ ಧ್ರುವ ಸಕ್ಸೇನಾ ಸೇರಿದಂತೆ 13 ಜನರನ್ನು ಬಂಧಿಸಲಾಗಿತ್ತು. ಶನಿವಾರ ಸಂಜೆ ಮಧ್ಯಪ್ರದೇಶದ ಛತ್ತರಪುರ ನಿವಾಸಿ ಸಹಯೋಗ ಸಿಂಗ್ ಎಂಬಾತ 13ನೇ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ.

x

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News