ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಸರ್ವಜ್ಞ ವೃತ್ತ ನಿರ್ಮಾಣ: ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು, ಫೆ.20: ಪುತ್ತೂರು-ಉಪ್ಪಿನಂಗಡಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಕೆಮ್ಮಾಯಿ ಅಥವಾ ಇನ್ನಿತರ ಪ್ರದೇಶದಲ್ಲಿ ರಸ್ತೆಯಲ್ಲಿ ಸರ್ವಜ್ಞ ವೃತ್ತ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಕುಲಾಲ ಸಮಾಜ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ ಸೋಮವಾರ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಡು ಬಡತನದಲ್ಲಿ ಹುಟ್ಟಿ ಶಿಕ್ಷಣ ವಂಚಿತರಾಗಿದ್ದ ಸರ್ವಜ್ಞ ಜಗತ್ತನ್ನು ನೋಡುತ್ತಲೇ ತನ್ನ ಸಂದೇಶಗಳ ಮೂಲಕ ಬದಲಾವಣೆಗಾಗಿ ಶ್ರಮಿಸಿದ್ದಾರೆ. ಸರ್ವಜ್ಞ ತನ್ನ ವಚನದಲ್ಲಿ ಹೇಳಿರುವುದನ್ನು ಬದುಕಿನಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಸರ್ವಜ್ಞ ಸಂಸ್ಮರಣೆ ಮಾಡಿದ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್, ಜಾತಿ ಪದ್ಧತಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಹಾವೇರಿಯಲ್ಲಿ ಜನಿಸಿದ ಸರ್ವಜ್ಞನು ಬಳಿಕ ತನ್ನ ತ್ರಿಪದಿಗಳ ಮೂಲಕ ಜಾತಿ ಧರ್ಮಗಳನ್ನು ಮೀರಿದ ಸಹಬಾಳ್ವೆಯ ಸಂದೇಶಗಳನ್ನು ನೀಡಿದ್ದಾರೆ. ವಿಶ್ವ ಬಂಧುತ್ವವನ್ನು ಜಗತ್ತಿಗೆ ಸಾರಿದ ಸರ್ವಜ್ಞನ ಪ್ರತಿಯೊಂದು ಮಾತುಗಳೂ ವೈಶಿಷ್ಟಪೂರ್ಣ. ನಮ್ಮ ನಡುವೆ ಜಾತಿ-ಧರ್ಮಗಳ ಹೆಸರಿನಲ್ಲಿ ಅನಾರೋಗ್ಯಕರ ಪೈಪೋಟಿ ನಡೆಯುತ್ತಿರುವುದು ಸಮಾಜಕ್ಕೆ ಉತ್ತಮವಲ್ಲ. ಸಹಬಾಳ್ವೆಯ ಜೀವನದಿಂದ ಶಾಂತಿ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಸರ್ವಜ್ಞನ ವಚನಗಳು ತಿಳಿಸುತ್ತಿದೆ. ಸರ್ವಜ್ಞ ಯಾವುದೇ ಜಾತಿ ಪಂಗಡಕ್ಕೆ ಸೀಮಿತರಲ್ಲದ ಸರ್ವವ್ಯಾಪಿ ಎಂದರು.
ಪುತ್ತೂರು ಸಹಾಯಕ ಆಯುಕ್ತ ರಘುನಂದನ್ ಮೂರ್ತಿ ಸರ್ವಜ್ಞ ಸಂಸ್ಮರಣಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ನಪಂ ಅಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಶುಭ ಹಾರೈಸಿದರು.
ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ., ತಹಶೀಲ್ದಾರ್ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ಗಾರ್ಗಿ ಜೈನ್, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ಶ್ರೀಧರ್ ಸ್ವಾಗತಿಸಿ, ವಂದಿಸಿದರು. ಕಂದಾಯ ಇಲಾಖೆಯ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.