ಬಿಎಸ್‌ಪಿ ಈಗ ‘ಬೆಹೆನ್‌ಜಿ ಸಂಪತ್ತಿ ಪಾರ್ಟಿ’:ಮೋದಿ
ಜಲಾಯುಂ(ಉ.ಪ್ರ),ಫೆ.20: ನೋಟು ರದ್ದತಿಗೆ ಮಾಯಾವತಿಯವರ ವಿರೋಧವನ್ನು ಅಣಕವಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,ಬಿಎಸ್‌ಪಿಯೀಗ ಬಹುಜನ ಸಮಾಜ ಪಾರ್ಟಿಯಾಗಿ ಉಳಿದಿಲ್ಲ...ಅದೀಗ ‘ಬೆಹೆನ್‌ಜಿ ಸಂಪತ್ತಿ ಪಾರ್ಟಿ’ ಆಗಿದೆ ಎಂದು ಹೇಳಿದರು.
ಬುಂದೇಲಖಂಡ್‌ನ ಜಲಾಯುಂ ಬಳಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್‌ಲಿ ಮಾತನಾಡಿದ ಮೋದಿ, ತಮಗಾಗಿಯೇ ಸಂಪತ್ತನ್ನು ಶೇಖರಿಸುವವರು ಜನರ ಸಮಸ್ಯೆಗಳನ್ನು ಬಗೆಹರಿಸುವುದು ಎಂದೂ ಸಾಧ್ಯವಿಲ್ಲ ಎಂದರು.
ನೋಟು ರದ್ದತಿ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನೂ ಅವರು ತರಾಟೆಗೆತ್ತಿಕೊಂಡರು.
ಬಿಎಸ್‌ಪಿ ಇಂದು ಎಲ್ಲಿಗೆ ಮುಟ್ಟಿದೆ....? ಕಳೆದ ವರ್ಷದ ನ.8ರಂದು ತಾನು ನೋಟು ರದ್ದತಿಯನ್ನು ಪ್ರಕಟಿಸಿದಾಗ ಎಂದೂ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡದ ಬದ್ಧವೈರಿಗಳಾದ ಎಸ್ಪಿ ಮತ್ತು ಬಿಎಸ್‌ಪಿ ಒಂದಾಗಿದ್ದವು. ಅವು ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ನೋಟು ರದ್ದತಿಯ ವಿರುದ್ಧ ಮಾತನಾಡತೊಡಗಿದ್ದವು ಎಂದರು.
ಉತ್ತರ ಪ್ರದೇಶದ ಪಕ್ಷಗಳ ಮುಖ್ಯ ಕಳವಳ ನೋಟು ರದ್ದತಿ ಕುರಿತಾಗಿರಲಿಲ್ಲ. ಅಕ್ರಮ ಹಣವನ್ನು ವಿಲೇವಾರಿ ಮಾಡಿಕೊಳ್ಳಲು ತಮಗೆ ಸಾಕಷ್ಟು ಕಾಲಾವಕಾಶ ಸಿಗಲಿಲ್ಲ ಎನ್ನುವುದು ಅವುಗಳ ಮುಖ್ಯ ಕಳವಳವಾಗಿತ್ತು ಎಂದ ಮೋದಿ, ಸರಕಾರವು ಸರಿಯಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ಎಂದು ಬೆಹೆನ್‌ಜಿ(ಮಾಯಾವತಿ) ಆರೋಪಿಸುತ್ತಾರೆ. ಪೂರ್ವ ಸಿದ್ಧತೆ ಮಾಡಿಕೊಳ್ಳದಿದ್ದುದು ಸರಕಾರವೋ ಅವರೋ? ನೋಟು ರದ್ದತಿಯನ್ನು ಜಾರಿಗೊಳಿಸುವ ಮುನ್ನ ಒಂದು ವಾರದ ಸಮಯಾವಕಾಶ ನೀಡಬೇಕಾಗಿತ್ತು ಎಂದು ಅವರು ಹೇಳಿದ್ದರು. ಮುಲಾಯಂ ಸಿಂಗ್ ಕೂಡ ಇದನ್ನೇ ಹೇಳಿದ್ದರು. ಏಕಾಏಕಿ ಬ್ಯಾಂಕುಗಳಿಗೆ ಹಣ ಹರಿದು ಬರಲು ಆರಂಭಗೊಂಡಿತ್ತು ಮತ್ತು ಚುನಾವಣೆಯ ಸಮಯಕ್ಕೇ ತನ್ನ ಸೋದರನ ಖಾತೆಯನ್ನು ಬಹಿರಂಗ ಗೊಳಿಸಿದ್ದೇಕೆ...100 ಕೋರೂ.ಜಮಾ ಮಾಡಲಾಗಿದೆ ಎನ್ನುವುದನ್ನು ಚರ್ಚಿಸಿದ್ದೇಕೆ ಎಂದು ಮಾಯಾವತಿ ಕೂಗಾಡತೊಡಗಿದ್ದರು ಎಂದರು.
ಬೆಹೆನ್‌ಜಿ,ಚುನಾವಣೆಗಳು ನಡೆಯಲಿವೆ ಎಂದು ಚರ್ಚೆಯಾಗಿದ್ದಲ್ಲ. ನೋಟು ರದ್ದತಿಯ ಬಳಿಕ ನೀವು 100 ಕೋ.ರೂ.ಜಮಾ ಮಾಡಿದ್ದಕ್ಕೆ ಚರ್ಚೆಗಳು ನಡೆದಿದ್ದವು. ಬಿಎಸ್‌ಪಿ ಬಹುಜನ ಸಮಾಜ ಪಾರ್ಟಿಯಾಗುಳಿದಿಲ್ಲ. ಬಹುಜನವಂತೂ ಮಾಯಾವತಿಯವರಲ್ಲಿ ಸೇರಿಕೊಂಡು ಅದೀಗ ಬೆಹೆನ್‌ಜಿ ಸಂಪತ್ತಿ ಪಾರ್ಟಿಯಾಗಿದೆ ಎಂದು ಮೋದಿ ಛೇಡಿಸಿದರು.