ಸಕಾಲದಲ್ಲಿ ಪಡಿತರ ವಿತರಣೆಗೆ ಕ್ರಮ: ಎ.ಟಿ.ಜಯಪ್ಪ
ಮಂಗಳೂರು, ಫೆ.20: ಜಿಲ್ಲೆಯ ಪಡಿತರ ಚೀಟಿದಾರರಿಗೆ ಕೋಟೆಕಾರ್, ಬೆಳ್ಮ, ಕಿನ್ಯ, ಪಾವೂರು ಮತ್ತಿತರ ಕೆಲವು ಕಡೆಗಳಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಕಾಲದಲ್ಲಿ ಪಡಿತರ ವಿತರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಎ.ಟಿ.ಜಯಪ್ಪ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ರಾಜ್ಯ ಸರಕಾರ ಕೂಪನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದರಂತೆ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಹಾರ ಸಾಮಗ್ರಿಗಳನ್ನು ಆಯಾ ತಿಂಗಳೊಳಗೆ ಪೂರೈಕೆ ಮಾಡಲಾಗುತ್ತದೆ. ಪಡಿತರ ಚೀಟಿದಾರರು ಕೂಪನ್ ವಿತರಣಾ ಕೇಂದ್ರದಿಂದ ಕೂಪನ್ ಪಡೆದು ನ್ಯಾಯಬೆಲೆಯ ಅಂಗಡಿಗೆ ನೀಡಬೇಕು.
ನ್ಯಾಯಬೆಲೆ ಅಂಗಡಿದಾರರು ಕೂಪನ್‌ನ ಬಾರ್‌ಕೋಡ್ ಪ್ರತಿಯನ್ನು ಪಡೆದು ಸ್ವತ: ಸ್ವೈಪ್ ಮಾಡಿಸಬೇಕು. ಅದರ ಆಧಾರದ ಮೇಲೆ ಆಹಾರ ಇಲಾಖೆಯು ಪಡಿತರ ಪೂರೈಕೆ ಮಾಡಲಿದೆ. ಈ ಬಗ್ಗೆ ಈಗಾಗಲೆ ಎಲ್ಲ ನ್ಯಾಯಬೆಲೆ ಅಂಗಡಿದಾರರಿಗೆ ಸಭೆ ಕರೆದು ಮಾಹಿತಿ ನೀಡಲಾಗಿದೆ. ತರಬೇತಿ ಕಾರ್ಯಗಾರವನ್ನೂ ನಡೆಸಲಾಗಿದೆ. ಕೆಲವು ಮಂದಿ ಮಾತ್ರ ನಿಯಮ ಉಲ್ಲಂಘಿಸಿದ್ದು, ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗಿದೆ ಎಂದರು.
ಪಡಿತರ ದಾಸ್ತಾನು ಕೇಂದ್ರದಿಂದ ಸಾಗಾಟಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಯಿತ್ತು. ಅದರ ಪರಿಹಾರಕ್ಕೆ ಕ್ರಮ ಜರಗಿಸಲಾಗಿದೆ. ಪ್ರತೀ ತಿಂಗಳು ಬಿಪಿಎಲ್ ಕಾರ್ಡ್‌ದಾರರಿಗೆ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ತಲಾ 5 ಕೆ.ಜಿ. ಅಕ್ಕಿ (ಉಚಿತ), 15 ರೂ.ಗೆ 1 ಕೆ.ಜಿ.ಸಕ್ಕರೆ, 2 ರೂ.ಗೆ 1 ಕೆ.ಜಿ. ಉಪ್ಪು, 40 ರೂ.ಗೆ. 1 ಲೀ. ಸೂರ್ಯಕಾಂತಿ ಎಣ್ಣೆ, 33 ರೂ.ಗೆ 1 ಕೆ.ಜಿ. ಹೆಸರುಬೇಳೆ ನೀಡಲಾಗುತ್ತದೆ. ಅಡುಗೆ ಅನಿಲ ಇಲ್ಲದವರಿಗೆ 3 ಲೀ. ಸೀಮೆಎಣ್ಣೆ ( 1 ಲೀ.ಗೆ 25 ರೂ.) ನೀಡಲಾಗುತ್ತದೆ.
ಎಪಿಎಲ್ ಪಡಿತರ ಕಾರ್ಡ್‌ದಾರರಿಗೆ ಒಬ್ಬ ಸದಸ್ಯನಿಗೆ 3 ಕೆ.ಜಿ. ಅಕ್ಕಿ (ತಲಾ 15 ರೂ)ಮತ್ತು 2 ಕೆ.ಜಿ. ಗೋಧಿ (ತಲಾ 10 ರೂ.) ನೀಡಲಾಗುತ್ತದೆ. ಒಂದಕ್ಕಿಂತ ಜಾಸ್ತಿ ಸದಸ್ಯ ಇದ್ದರೆ ತಲಾ 5 ಕೆಜಿ ಅಕ್ಕಿ ಮತ್ತು 5 ಕೆ.ಜಿ. ಗೋಧಿ ನೀಡಲಾಗುತ್ತದೆ. ಅಡುಗೆ ಅನಿಲ ಇಲ್ಲದವರಿಗೆ 2 ಲೀ. ಸೀಮೆಎಣ್ಣೆ (1 ಲೀ.ಗೆ 25 ರೂ.) ನೀಡಲಾಗುತ್ತದೆ. ಪಡಿತರ ವಿತರಣೆಗೆ ಸಂಬಂಧಿಸಿ ಯಾವುದೇ ಸಮಸ್ಯೆ ಇದ್ದರೆ ಇಲಾಖಾ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕ ಎ.ಟಿ.ಜಯಪ್ಪ ಮನವಿ ಮಾಡಿದ್ದಾರೆ.