ನಾಲ್ಕು ಗೋಡೆಗಳ ಮಧ್ಯೆ ಜಯಂತಿಗಳ ಆಚರಣೆ ಬೇಡ: ಲೋಬೊ
ಮಂಗಳೂರು, ಫೆ.20: ದಾರ್ಶನಿಕರ ಜಯಂತಿಗಳು ನಾಲ್ಕು ಗೋಡೆಗಳ ಮಧ್ಯೆ ನಡೆಸುವುದು ಸರಿಯಲ್ಲ. ಇದಕ್ಕೆ ನನ್ನ ತೀವ್ರ ವಿರೋಧವಿದೆ. ಸರ್ವಜ್ಞ ಜಯಂತಿ, ಕನಕನ ಜಯಂತಿ ಮೊದಲಾದವಗಳು ಜನರ ಮಧ್ಯೆ ನಡೆಯಬೇಕಾಗಿದೆ. ಹಾಗಾಗಿ ಮುಂದಿನ ಕಾರ್ಯಕ್ರಮವನ್ನು ಸಂಘಟನೆ, ಸಮುದಾಯಗಳು ಜನರ ಮಧ್ಯೆ ನಡೆಸುವಂತೆ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ, ಕುಂಬಾರರ ಯುವವೇದಿಕೆ ಸಹಯೋಗದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಸೋಮವಾರ ಜಿಪಂ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಮಧ್ಯೆಯೇ ಬದುಕಿ ಜನಜೀವನ, ಸಂಸ್ಕೃತಿ, ಭಾಷೆಯ ಮೂಲಕ ಅನಿಸಿದ್ದನ್ನು 3 ಸಾಲಿನ ಪದ್ಯ ಬರೆದು ಜನರಲ್ಲಿ ತಿಳುವಳಿಕೆ ಮೂಡುವಂತೆ ಮಾಡಿದ ಮಹಾಕವಿ ಸರ್ವಜ್ಞನ ವಚನ ಇಂದಿಗೂ ಪ್ರಸ್ತುತ. ಸರ್ವಜ್ಞ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಸರ್ವಜ್ಞನ ವಚನ ಸಾರ್ವಕಾಲಿಕ. ಎಲ್ಲವನ್ನೂ ಮೀರಿ ಬೆಳೆಯುವವರೂ ಸಮುದಾಯ ಮಾತ್ರವಲ್ಲ ಸಮಾಜದ ಆಸ್ತಿಯಾಗಬಲ್ಲರು. ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಯತ್ನಿಸಿದ ಸರ್ವಜ್ಞ ಎಲ್ಲರಿಗೂ ಮಾದರಿ ಎಂದು ಲೋಬೋ ನುಡಿದರು.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮುಖ್ಯ ಅತಿಥಿಯಾಗಿದ್ದರು. ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಪ್ರೊ.ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು 'ಕವಿ ಸರ್ವಜ್ಞ'ನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ 'ಸರ್ವಜ್ಞ ವಾಣಿ' ಮಾಸಪತ್ರಿಕೆಯನ್ನು ಬಿಡುಗಡೆಮಾಡಲಾಯಿತು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ದ.ಕ.ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಸುಜಿರ್ ಶ್ರೆಧರ್ ಕೆ., ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವಿ ರಾಜ್, ಕರಾವಳಿ ಕುಲಾಲ ಕುಂಬಾರರ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಜಯೇಶ್ ಗೋವಿಂದ್, ಪೃಥ್ವಿರಾಜ್ ಎಡಪದವು, ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.