ಐದು ತಿಂಗಳುಗಳಿಂದ ತೆರವಾಗಿದ್ದ ಜಯಲಲಿತಾ ಖುರ್ಚಿಯಲ್ಲಿ ಕುಳಿತ ಮುಖ್ಯಮಂತ್ರಿ ಪಳನಿಸ್ವಾಮಿ
ಚೆನ್ನೈ,ಫೆ.20: ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಂಡ ಹುರುಪಿನಲ್ಲಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಸೋಮವಾರದಿಂದ ಅಧಿಕೃತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬಳಸುತ್ತಿದ್ದ ಕಚೇರಿಗೆ ತೆರಳಿ ಅವರು ಕುಳಿತುಕೊಳ್ಳುತ್ತಿದ್ದ ಖುರ್ಚಿಯಲ್ಲಿ ಆಸೀನರಾಗಿ ಕೆಲಸವನ್ನು ಪ್ರಾರಂಭಿಸಿದರು. ಜಯಲಲಿತಾ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ ಬಳಿಕ ಐದು ತಿಂಗಳಿಂದಲೂ ಈ ಖುರ್ಚಿ ಖಾಲಿಯಾಗಿಯೇ ಉಳಿದುಕೊಂಡಿತ್ತು.
ಡಿ.5ರಂದು ರಾತ್ರಿ ಜಯಲಲಿತಾ ನಿಧನರಾದ ಬೆನ್ನಿಗೇ ಒ.ಪನ್ನೀರಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಾದರೂ ಅವರು ‘ಅಮ್ಮ’ನ ಕಚೇರಿಯನ್ನಾಗಲೀ, ಖುರ್ಚಿಯನ್ನಾಗಲೀ ಬಳಸಿರಲಿಲ್ಲ. ಹಿಂದೆ ಎರಡು ಬಾರಿ ಹಂಗಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಇದೇ ವಿಧೇಯತೆಯನ್ನು ಪ್ರದರ್ಶಿಸಿದ್ದರು. ಸಂಪುಟ ಸಭೆಗಳನ್ನೂ ಜಯಲಲಿತಾರ ಭಾವಚಿತ್ರವನ್ನಿಟ್ಟುಕೊಂಡೇ ನಡೆಸುತ್ತಿದ್ದ ಅವರು ತಾನು ಅಮ್ಮನ ಪ್ರತಿನಿಧಿ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.
ಆದರೆ ಪಳನಿಸ್ವಾಮಿ ಅವರು ಜಯಲಲಿತಾರ ಕಚೇರಿಯಲ್ಲಿ ಅವರ ಖುರ್ಚಿಯಲ್ಲಿ ಕುಳಿತುಕೊಂಡು ಸಚಿವರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕುವ ಮೂಲಕ ತಾನು ಇಂತಹ ಭಾವನೆಗಳಿಗೆ ಪಕ್ಕಾಗಿಲ್ಲ ಎನ್ನುವ ಸಂದೇಶವನ್ನು ರವಾನಿಸಿದರು.