×
Ad

ಪುತ್ತೂರು: ದಲಿತ ಕೇಶವ ಅಸಹಜ ಸಾವು; ತನಿಖೆಗೆ ಆಗ್ರಹಿಸಿ ಫೆ.27ರಿಂದ ಧರಣಿ

Update: 2017-02-20 18:00 IST

ಪುತ್ತೂರು, ಫೆ.20: ಪುತ್ತೂರು ತಾಲೂಕಿನ ಸುಳ್ಯಪದವಿನಲ್ಲಿರುವ ಬಾರ್‌ನ ಜಗಲಿಯಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದ ಕೇಶವ ಅವರನ್ನು ಬಾರ್‌ನ ಕೆಲಸದಾಳುಗಳು ಹೊಡೆದು, ಆತನ ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಬಾರ್‌ನ ಪರವಾನಿಗೆ ರದ್ದುಗೊಳಿಸುವಂತೆ ಆಗ್ರಹಿಸಿ ಫೆ.27ರ ಬಳಿಕ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಸೌಹಾರ್ದ ವೇದಿಕೆಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಶವ ಅವರ ಸಾವಿನ ಪ್ರಕರಣವನ್ನು ಮುಂದಿನ ರವಿವಾರದ ಒಳಗಾಗಿ ಮರು ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಬಾರ್‌ನ ಪರವಾನಿಗೆ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ದಲಿತರು, ಊರಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರದಿಂದ ಬಾರ್‌ನ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಾರ್ ಮಾಲಕರು ಇದೀಗ ಹಣದ ಅಮಿಷವೊಡ್ಡಿ ರಾಜಿ ಪಂಚಾಯತಿಗೆ ಒತ್ತಾಯ ಮಾಡುತ್ತಿದ್ದು, ತನ್ನ ತಪ್ಪನ್ನು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ. ಬಾರ್ ಮಾಲಕರ ವಿರುದ್ದ ಇನ್ನೂ ಹಲವು ಕ್ರಿಮಿನಲ್ ಅಪರಾಧಗಳಿದೆ. ಇವೆಲ್ಲವನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮಂಡಲ ಪಂಚಾಯತ್ ಸದಸ್ಯ ಅಂಬೋಡಿ ಅಮ್ಚಿನಡ್ಕ, ಮೃತ ಕೇಶವ ಅವರ ತಂದೆ ಬಾಬು ಮತ್ತು ಪತ್ನಿ ಸುಮಿತ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News