×
Ad

ಸರ್ವಜ್ಞನ ತ್ರಿಪದಿಗಳನ್ನು ಅನುಸರಿಸಿದರೆ ಯಶಸ್ಸು ಸಾಧ್ಯ: ಜಿಲ್ಲಾಧಿಕಾರಿ ವೆಂಕಟೇಶ್

Update: 2017-02-20 18:31 IST

ಉಡುಪಿ, ಫೆ.20: ಸರ್ವಜ್ಞ ಕವಿ ರಚಿಸಿರುವ ತ್ರಿಪದಿಗಳನ್ನು ಅರ್ಥೈಸಿ ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಕವಿ ಸರ್ವಜ್ಞ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

16ನೆ ಶತಮಾನದ ಪ್ರಭಾವಿ ವಚನಕಾರನಾಗಿದ್ದ ಸರ್ವಜ್ಞ, ಯಾವುದೇ ವಿದ್ಯಾಲಯದಲ್ಲಿ ಪದವಿ ಪಡೆಯದೆ ತನ್ನ ಅನುಭವದ ಮೂಲಕವೇ ತ್ರಿಪದಿಗಳನ್ನು ರಚಿಸಿದರು. ಸರ್ವಜ್ಞ ಕವಿಯ ಸುಮಾರು 7000 ತ್ರಿಪದಿಗಳು ಲಭ್ಯವಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್ವಜ್ಞ ಕವಿ ತಿಳಿಸದ ವಿಚಾರಗಳೇ ಇಲ್ಲ. ಅಂದಿನ ಸಮಾಜದಲ್ಲಿದ್ದ ಅನಿಷ್ಠ ಆಚಾರ ವಿಚಾರಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ವಿರುದ್ಧ ಅರಿವು ಮೂಡಿಸಿದ ಸರ್ವಜ್ಞರ ತ್ರಿಪದಿಗಳು ಇಂದಿಗೂ ಪ್ರಸ್ತುತ ಎಂದರು.

 ಕವಿ ಸರ್ವಜ್ಞ ಕುರಿತು ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ನಿಕೇತನ ಮಾತನಾಡಿ, ಸರ್ವಜ್ಞರ ವಚನಗಳನ್ನು ಅನುಸರಿಸಿದರೆ ಧರ್ಮಧರ್ಮಗಳ ಮಧ್ಯೆ, ಜಾತಿ ಜಾತಿ ಗಳ ನಡುವೆ ಘರ್ಷಣೆ ಉಂಟಾಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಸಮಾಜದ ಸಾಮಾಜಿಕ ಪಿಡುಗುಗಳು, ಜಾತೀಯತೆ, ಅಸ್ಪಶ್ಯತೆಯನ್ನು ಟೀಕಿಸುವ ಮೂಲಕ ಸರ್ವಜ್ಞ ನೇರ ನಿಷ್ಠುರವಾದಿಯಾಗಿದ್ದರು. ಇವರ ತ್ರಿಪದಿಗಳಿಂದ ಪರಿಣಾಮಕಾರಿ ವ್ಯಕ್ತಿತ್ವ ಹೊಂದಲು ಸಾಧ್ಯ. ಗುರು ಶಿಷ್ಯರ ಸಂಬಂಧ, ಮಹಿಳೆಯರಿಗೆ ಗೌರವ ನೀಡುವ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ತನ್ನ ತ್ರಿಪದಿಗಳಲ್ಲಿ ತಿಳಿಸಿರುವ ಸರ್ವಜ್ಞ, ಜಗತ್ತಿನ ಮಾನವರೆಲ್ಲಾ ಒಂದೇ ಎನ್ನುವ ಸಂದೇಶ ವನ್ನು ಸಾರಿದ್ದಾರೆ ಎಂದು ಅವರು ತಿಳಿಸಿದರು.

ಕವಿ ಸರ್ವಜ್ಞ ಜಯಂತಿ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾದ ಜಿಲ್ಲಾ ಮಟ್ಟದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿದ್ದರು.

ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ವಳಕಾಡು ಪ್ರೌಢಶಾಲೆಯ ಮುಖ್ಯೋಪಧ್ಯಾಯನಿ ನಿರ್ಮಲಾ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಉಡುಪಿ ಘಟಕದ ಅಧ್ಯಕ್ಷ ಶಂಕರ್ ಕುಲಾಲ್ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮ ವಂದಿಸಿದರು. ಗಣೇಶ್ ಕುಮಾರ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕಲಾವತಿ ದಯಾನಂದ ಅವರಿಂದ ಕವಿ ಸರ್ವಜ್ಞರ ವಚನ ಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News