104 ಉಪಗ್ರಹ ಉಡಾವಣೆ : ಭಾರತದ ಸಾಧನೆ ಚೀನಾಕ್ಕೆ ಎಚ್ಚರಿಕೆಯ ಕರೆಗಂಟೆ
ಹೊಸದಿಲ್ಲಿ,ಫೆ.20: ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆೆ ಉಡಾವಣೆಗೊಳಿಸಿರುವ ಭಾರತದ ವಿಶ್ವದಾಖಲೆಯ ಸಾಧನೆಯನ್ನು ಚೀನಾ ಮುಕ್ತಕಂಠದಿಂದ ಶ್ಲಾಘಿಸಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಈ ಸಾಧನೆಯು, ಚೀನಾದ ಬಾಹ್ಯಾಕಾಶ ಉದ್ಯಮಕ್ಕೆ ‘‘ ಎಚ್ಚರಿಕೆಯ ಕರೆಗಂಟೆ’’ಯಾಗಿದೆಯೆಂದು ಅದು ಬಣ್ಣಿಸಿದೆ. ವಾಣಿಜ್ಯ ಮಟ್ಟದ ಉಪಗ್ರಹ ಉಡಾವಣೆಗಳಲ್ಲಿ ಭಾರತದೊಂದಿಗೆ ತನ್ನ ದೇಶವು ಸ್ಪರ್ಧೆಯನ್ನು ಎದುರಿಸುವುದು ಅನಿವಾರ್ಯವೆಂದು ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ನಲ್ಲಿ ಸೋಮವಾರ ಪ್ರಕಟವಾದ ಲೇಖನವೊಂದು ಅಭಿಪ್ರಾಯಿಸಿದೆ.
‘‘ ಭಾರತದಿಂದ ಬಾಹ್ಯಾಕಾಶ ಕಕ್ಷೆಗೆ 104 ಉಪಗ್ರಹಗಳ ಯಶಸ್ವಿ ಉಡಾವಣೆಯು, ಚೀನಾದ ವಾಣಿಜ್ಯ ಬಾಹ್ಯಾಕಾಶ ಉದ್ಯಮಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಹಾಗೂ ಈ ವಿಷಯದಲ್ಲಿ ನಮ್ಮ ದೇಶವು,ಹಲವು ಪಾಠಗಳನ್ನು ಕಲಿಯಬೇಕಾಗಿದೆ’’ ಎಂದು ಲೇಖನವು ಹೇಳಿದೆ.
ಇತ್ತೀಚೆಗೆ ಪಿಎಸ್‌ಎಲ್‌ವಿ-ವಿ-ಸಿ39 ರಾಕೆಟನ್ನು ಮಿತವೆಚ್ಚದಲ್ಲಿ ಉಡಾವಣೆಗೊಳಿಸಿದ ಇಸ್ರೋದ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ದಿನಪತ್ರಿಕೆಯು ‘‘ ಉಪಗ್ರಹಗಳನ್ನು ಭೂಕಕ್ಷೆಯಲ್ಲಿ ಸ್ಥಾಪಿಸುವ ವೆಚ್ಚವನ್ನು ಕಡಿಮೆಗೊಳಿಸುವುದಕ್ಕಾಗಿ ಚೀನಾವು ತುರ್ತು ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯವಿದೆ’’ ಎಂದಿದೆ.
ಇಸ್ರೋದ ಯಶಸ್ವಿ ‘ಮಂಗಳಯಾನ’ದ ಬಗ್ಗೆಯೂ ಪ್ರಸ್ತಾಪಿಸಿರುವ ಲೇಖನವು ‘‘ 2014ರಲ್ಲಿ ಭಾರತವು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ನಾಲ್ಕನೆ ದೇಶವಾಗಿದೆ. ಇದರೊದಿಗೆ ಭಾರತವು, 2012ರಲ್ಲಿ ಮಂಗಳನೆಡೆಗೆ ನೌಕೆಯನ್ನು ಕಳುಹಿಸುವ ಪ್ರಯತ್ನದಲ್ಲಿ ವಿಫಲವಾಗಿರುವ ಚೀನಾಕ್ಕೆ ಸೆಡ್ಡುಹೊಡೆಯುವ ಸೂಚನೆ ನೀಡಿ’’ ಎಂದು ಹೇಳಿದೆ.
ಜಾಗತಿಕವಾಗಿ ಬಾಹ್ಯಾಕಾಶ ಉದ್ಯಮ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಚೀನಾವು ಬೆಳವಣಿಗೆ ಹೊಂದುತ್ತಿದ್ದರೂ, ಅದರ ವಾಣಿಜ್ಯ ಬಾಹ್ಯಾಕಾಶ ವಲಯವು ಇನ್ನೂ ಶೈಶವಾಸ್ಥೆಯಲ್ಲಿದೆಯೆಂದು ಗ್ಲೋಬಲ್ ಟೈಮ್ಸ್‌ನ ಲೇಖನವು ಅಭಿಪ್ರಾಯಿಸಿದೆ.