ನಾರಾಯಣ ಗುರುಗಳು ಮಹಾ ಮಾನವತಾವಾದಿ: ಜೆ.ಆರ್. ಲೋಬೊ

Update: 2017-02-20 14:19 GMT

ಮಂಗಳೂರು,ಫೆ.20: ನಾರಾಯಣ ಗುರುಗಳು ಮನುಕುಲಕ್ಕೆ ಸೇರಿದ ಮಹಾನ್ ಮಾನವತಾವಾದಿಯಾಗಿದ್ದರು. ಅವರ ಬಗ್ಗೆ ಇನ್ನಷ್ಟು ಪುಸ್ತಕಗಳು ಮುದ್ರಣಗೊಂಡು ಪ್ರಚಾರ ಪಡೆಯಬೇಕಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ನಗರದ ಸಹೋದಯ ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಪೇರೂರು ಜಾರು ರಚಿಸಿದ 'ಗುರುಕುಲೆ ಗುರು ನಾರಾಯಣ' ( ಗುರುಗಳಿಗೆ ಗುರು ನಾರಾಯಣ )ಎಂಬ ಕೃತಿಯನ್ನು ಅವರು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಮಾನವ ಕುಲ ಒಂದೇ ಎನ್ನುವ ಪ್ರತಿಪಾದನೆಯನ್ನು ಮಾಡಿದ ಮಹಾನ್ ವ್ಯಕ್ತಿತ್ವದ ನಾರಾಯಣ ಗುರುಗಳು ಸಮುಸ್ತ ಮನುಕುಲಕ್ಕೆ ಸಲ್ಲುವಂತಹ ಸಂದೇಶವನ್ನು ನೀಡಿದ್ದಾರೆ. ಅದು ಲೇಖನಗಳ ಮೂಲಕ ಕೃತಿಗಳ ಮೂಲಕ ಇನ್ನಷ್ಟು ವಿಸ್ತಾರವಾಗಬೇಕಾಗಿದೆ ಎಂದು ಜೆ.ಆರ್.ಲೋಬೊ ತಿಳಿಸಿದರು.

ಕೃತಿ ರಚಿಸಿದ ಪೇರೂರು ಜಾರು ಮಾತನಾಡಿ, ನಾರಾಯಣ ಗುರುಗಳು ಕೇರಳದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮೇಲು ಕೀಳು ಎಂಬ ತಾರತಮ್ಯ ನೀತಿಯ ವಿರುದ್ಧ ವೈದಿಕ ಶಾಹಿಯ ವಿರುದ್ಧ ಹೋರಾಟ ನಡೆಸಿದವರು. ಅದಕ್ಕಾಗಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಸವರ್ಣೀಯರು ಪ್ರಕರಣವನ್ನು ದಾಖಲಿಸಿದ್ದರು. ಶೋಷಿತ ವರ್ಗದವರಿಗೆ ದೇವಾಲಯ ಪ್ರವೇಶ ನಿಷೇಧವಿದ್ದಾಗ ಆ ಜಾತಿಯವರು ಪ್ರತ್ಯೇಕ ದೇವಾಲಯ ನಿರ್ಮಿಸಲು ನಾರಾಯಣ ಗುರುಗಳು ಕರೆ ನೀಡಿದರು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಸಸ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಹನಿ ಬಾಲ್ ಕಬ್ರಾಲ್,ಶಂಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.ಬೆನೆಟ್ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News