ಅಂಬೇಡ್ಕರ್ ಹಿಂದೂ ವಿರೋಧಿ ಅಲ್ಲ, ಹಿಂದೂ ಸಮಾಜ ಪುನರ್ ರಚನೆಕಾರ : ವಸಂತ್‌ಕುಮಾರ್
ಸುಳ್ಯ, ಫೆ.20: ಏಕ ರಾಷ್ಟ್ರೀಯತೆ ಮೂಡಿಸುವ ಉದ್ದೇಶದಿಂದ ಅಸಮಾನತೆ, ಅಸ್ಪ್ರಶ್ಯತೆ ಹೋಗಲಾಡಿಸುವ ದೃಷ್ಠಿಯಿಂದ ಜತೆಯಲ್ಲಿ ದೇಶದ ಬಲವರ್ಧನೆಗೋಸ್ಕರ ಡಾ.ಅಂಬೇಡ್ಕರ್ ಹೋರಾಟದ ಕ್ರಾಂತಿಯನ್ನೆ ರೂಪಿಸಿದ್ದರು. ಹೊರತು ಹಿಂದೂ ಸಮಾಜ ಒಡೆಯುದಕ್ಕಲ್ಲ. ಹಿಂದೂ ಸಮಾಜ ಪುನರ್‌ರಚನೆಯಾಗಬೇಕು ಎಂಬುದೇ ಅವರ ಗುರಿಯಾಗಿತ್ತು ಎಂದು ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾಬಿ.ವಿ.ವಸಂತ್‌ಕುಮಾರ್ ಹೇಳಿದರು.
ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ಡಾ.ಅಂಬೇಡ್ಕರ್‌ರವರ 125ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ಭಾರತೀಯತೆಯಲ್ಲಿ, ಜಾತೀಯತೆಯಲ್ಲಿ, ಹಿಂದುತ್ವದಲ್ಲಿ ಡಾಅಂಬೇಡ್ಕರರ ನಿಲುವು ಏನು ಎನ್ನುವುದರ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಕೇಂದ್ರಗಳಾಗಬೇಕು. ಕೇವಲ ಉಪನ್ಯಾಸಕ್ಕೆ ಸೀಮಿತವಾಗಬಾರದು. ಡಾಅಂಬೇಡ್ಕರ್ ದೇಶದ ಅತ್ಯಂತ ದೊಡ್ಡ ಜ್ಞಾನಿ. ಅವರ ಬಗ್ಗೆ ನಾವು ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ತಿಳಿದುಕೊಳ್ಳದಿದ್ದರೆ ನಾವು ಇಂದು ಸಮಾಜಕ್ಕೆ ತಪ್ಪನ್ನು ಎಸಗಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕೆವಿಜಿ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವೆಂಕಟ್ರಮಣ ಗೌಡ ಪಡ್ಡಂಬೈಲು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥ ಡಾಚಂದ್ರಶೇಖರ್ ಎ. ವಹಿಸಿದರು.
ವೇದಿಕೆಯಲ್ಲಿ ಎಬಿವಿಪಿ ಸುಳ್ಯ ನಗರ ಅಧ್ಯಕ್ಷ ದೀಪಕ್ ಕೆ.ಎಸ್., ಕಾರ್ಯದರ್ಶಿ ನಿಕೇಶ್ ಉಬರಡ್ಕ ಇದ್ದರು. ಪ್ರಿಯಾ ಪೈಕ ಕಾರ್ಯಕ್ರಮ ನಿರೂಪಿಸಿದರು.