ವಾರಾಹಿಯ ಏತ ನೀರಾವರಿ ಯೋಜನೆ ತಡೆಯಲು ಯತ್ನ ನಡೆಯುತ್ತಿದೆ: ಕೆಡಿಪಿ ಸಭೆಯಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಆರೋಪ
ಉಡುಪಿ, ಫೆ.20: ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಯಾದ ವಾರಾಹಿ ಯೋಜನೆಗಾಗಿ ರಾಜ್ಯ ಸರಕಾರ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿದರೂ ರೈತರ ಬೆಳೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈ ನಡುವೆ ವಾರಾಹಿ ಏತ ನೀರಾವರಿ ಯೋಜನೆಯನ್ನು ತಡೆಯುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಮಾಹಿತಿಗಳಿವೆ ಎಂದು ಹಿರಿಯ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ಮಣಿಪಾಲ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಕುರಿತ ಚರ್ಚೆಯ ವೇಳೆ ಮಾತನಾಡುತಿದ್ದರು.
ಈ ಕುರಿತು ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ವಾರಾಹಿ ನೀರಾವರಿ ಯೋಜನೆಯ ನೀರು ಬಾರಕೂರಿನ ತನಕ ಬರುವ ವ್ಯವಸ್ಥೆ ಇದೆ. ಇದನ್ನು ಉಡುಪಿಯವರೆಗೆ ವಿಸ್ತರಿಸಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ವಾರಾಹಿ ಯೋಜನೆಯ ಹಿರಿಯ ಇಂಜಿನಿಯರ್‌ಗಳು ಮಾತನಾಡಿ, ಯೋಜನೆಯಲ್ಲಿ ವಾರಾಹಿ ಡೈವರ್ಶನ್ ವಿಯರ್, ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ 0ಯಿಂದ 18.725ಕಿ.ಮೀ., ವಾರಾಹಿ ಬಲದಂಡೆ ಕಾಲುವೆ 18.419ರಿಂದ 42.73ಕಿ.ಮೀ., ಪಡದಂಡೆ ಕಾಲುವೆ 0ಯಿಂದ 44.35ಕಿ.ಮೀ. ಹಾಗೂ ವಾರಾಹಿ ಎಡದಂಡೆ ಕಾಲುವೆಯ 6ಕಿ.ಮೀ..ನಿಂದ ಪ್ರಾರಂಭವಾಗುವ ವಾರಾಹಿ ಏತ ಕಾಲುವೆಯು 0ರಿಂದ 33ಕಿ.ಮೀ. ಹರಿದು ಬಾರಕೂರಿನ ಬಳಿ ಕೊನೆಗೊಳ್ಳುವುದು ಎಂದರು.
ಇದರಿಂದ 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಇದು ಮೂಲತ ನೀರಾವರಿ ಉದ್ದೇಶದ ಯೋಜನೆಯಾಗಿದ್ದು, ಕುಡಿಯುವ ನೀರು ನೀಡುವ ಬಗ್ಗೆ ಪ್ರಸ್ತಾಪವಿಲ್ಲ ಎಂದರು.
ಈ ಹಂತದಲ್ಲಿ ಮಾತನಾಡಿದ ಪ್ರತಾಪಚಂದ್ರ ಶೆಟ್ಟಿ, ಯೋಜನೆಯಲ್ಲಿ ಬಲದಂಡೆ ಕಾಲುವೆ ಹಾಗೂ ಏತ ನೀರಾವರಿ ಯೋಜನೆಗಳು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ. ಏತ ನೀರಾವರಿ ಯೋಜನೆಯನ್ನು ತಡೆಯುವ ಪ್ರಯತ್ನ ನಡೆಯುತ್ತಿರುವ ಮಾಹಿತಿ ಇದೆ ಎಂದರು.
ಯೋಜನೆಯಲ್ಲಿ ಧಾರಾಳ ನೀರಿದ್ದರೂ ರೈತರಿಗೆ ಬಿಡಲಾಗುತ್ತಿಲ್ಲ. ರೈತರು ಬೆಳೆಗಳಿಗೆ ನೀರಿಲ್ಲದೇ ಕಂಗಾಲಾಗಿದ್ದಾರೆ ಎಂದರು. ಅಣೆಕಟ್ಟಿನಲ್ಲಿ ನೀರಿದೆ. ರೈತರಿಗೆ ನೀರು ಬಿಟ್ಟರೆ, ಅಲ್ಲಿರುವ ಖಾಸಗಿಯವರಿಗೆ ವಿದ್ಯುತ್ ತಯಾರಿಗೆ ನೀರು ಕಡಿಮೆಯಾಗುತ್ತೆ. ವಿದ್ಯುತ್‌ಗೆ ನೀರು ನೀಡಿದರೆ ರೈತರಿಗೆ ನೀರಿಲ್ಲ. ಹೀಗಾಗಿ ಈಗ ಏತವನ್ನು ಖಾಯಂ ಆಗಿ ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದರು.
ಇದಕ್ಕೆ ಉತ್ತರಿಸಿದ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್, ಯೋಜನೆಯನ್ನು ರೈತರಿಗಾಗಿ ಅನುಷ್ಠಾನಗೊಳಿಸಲಾಗುತಿದ್ದು, ಅವರಿಗೆ ನೀರು ನೀಡುವುದು ಪ್ರಥಮ ಆದ್ಯತೆಯಾಗಿದ್ದು, ವಿದ್ಯುತ್ ತಯಾರಿ ಅಲ್ಲ. ವಿದ್ಯುತ್ ತಯಾರಿಗೆ ನೀರು ನೀಡುತಿಲ್ಲ. ಅದು ಬಂದ್ ಆಗಿದೆ ಎಂದರು.
ಏತ ನೀರಾವರಿ ಪ್ರದೇಶದ ಮರು ಸರ್ವೆ ಆಗಬೇಕಾಗಿದೆ. ಈ ಪ್ರದೇಶದಲ್ಲಿ ಈಗ ರಸ್ತೆ, ಮನೆಗಳ ನಿರ್ಮಾಣವಾಗಿದೆ. ಹೀಗಾಗಿ ಹಿಂದೆ ಗುರುತಿಸಿದ ಜಾಗದಲ್ಲಿ ಕಾಲುವೆ ಮಾಡಲು ಆಗುವುದಿಲ್ಲ. ಹೀಗಾಗಿ ಅಲ್ಲೀಗ ಮರು ಸರ್ವೆಗೆ ಆದೇಶವಾಗಿದೆ ಎಂದರು.
ಅಲ್ಲದೇ ಅಲ್ಲಿ 32 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 28 ಹೆಕ್ಟೇರ್ ಡೀಮ್ಡ್ ಅರಣ್ಯವಿದ್ದು, ಈ ಸಮಸ್ಯೆ ಇತ್ಯರ್ಥಗೊಂಡಿಲ್ಲ ಎಂದು ಇಇ ವಿವರಿಸಿದರು.
ಮುಖ್ಯಮಂತ್ರಿ ಅವರೇ ಈ ಯೋಜನೆಯನ್ನು ಉದ್ಘಾಟಿಸಿದರೂ, ಅದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ. ಅಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ. ಶೇ.50ರಷ್ಟು ಸಿಬ್ಬಂದಿ ಕೊರತೆ ಇದೆ. ಜವಾಬ್ದಾರಿ ಹೊರುವವರು ಯಾರೂ ಇಲ್ಲ ಎಂದು ಪ್ರತಾಪ್‌ಚಂದ್ರ ಶೆಟ್ಟಿ ದೂರಿದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ವಾರಾಹಿಯಲ್ಲಿ 16 ಟಿಎಂಸಿ ನೀರು ಲಭ್ಯವಿರುವ ಬಗ್ಗೆ ಮಾಹಿತಿ ಇದೆ. ಆದುದರಿಂದ ಕಾಲುವೆಯ ಮೂಲಕ ಉಡುಪಿಯವರೆಗೆ ಕುಡಿಯುವ ನೀರು ನೀಡಬಹುದು ಎಂದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮುಂದಿನ ಮಾ.6ಕ್ಕೆ ವಾರಾಹಿ ಕುರಿತಂತೆ ಹೊಸಂಗಡಿಯಲ್ಲಿ ಸಭೆಯನ್ನು ನಡೆಸಲಿದ್ದೇನೆ. ಎಲ್ಲಾ ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸೋಣ. ಅನಂತರ ನೀರಾವರಿ ಸಚಿವರನ್ನು ಕರೆಸಿ ಚರ್ಚಿಸೋಣ. ಬೇಕಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿಯಾಗೋಣ ಎಂದು ಚರ್ಚೆಗೆ ಮಂಗಳ ಹಾಡಿದರು.
ಮರಳು ಸಮಸ್ಯೆ:
ರಳು ಸಮಸ್ಯೆ, ಜಿಲ್ಲೆಯಿಂದ ಹೊರಗೆ ಅಕ್ರಮವಾಗಿ ಮರಳು ಸಾಗಾಟ, ಅಕ್ರಮದ ನೆಪದಲ್ಲಿ ಬಡ ದೋಣಿಯವನ ಮೇಲೆ ಹಾಕಲಾಗುತ್ತಿರುವ ಭಾರೀ ಪ್ರಮಾಣ ದಂಡದ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರುಳುಗಾರಿಕೆಗೆ ಚೆನ್ನೈನ ಹಸಿರು ಪೀಠದ ತೀರ್ಪನ್ನು ಕಾಯಲಾಗುತ್ತಿದೆ ಎಂದು ಸಚಿವರು ನುಡಿದರು.
ವಂಡ್ಸೆ ಗ್ರಾಪಂ ವ್ಯಾಪ್ತಿಯ ಅರಣ್ಯ ಒತ್ತುವರಿ ಜಾಗದಲ್ಲಿ ವಾಸ ಮಾಡಿಕೊಂಡಿರುವ ಆರು ಮಂದಿ ಕೊರಗ ಕುಟುಂಬದವರಿಗೆ, ಈಗಿರುವ ಜಾಗ ಅರಣ್ಯ ಪ್ರದೇಶವಾಗಿರುವುದರಿಂದ ಅದನ್ನು ನೀಡಲು ಬರುವುದಿಲ್ಲ. ಹೊರಗೆ ಬೇರೆ ಕಡೆ ಜಾಗ ಹುಡುಕುವಂತೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಕೊರಗ ಜನಾಂಗದವರಿಗೆ 1500 ಮನೆ ನೀಡುವ ಗುರಿ ಇದ್ದು, ಈಗಾಗಲೇ 975 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. 605 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ 276 ಮನೆ ಪ್ರಗತಿಯಲ್ಲಿದೆ ಎಂದು ಐಟಿಡಿಪಿ ಅಧಿಕಾರಿಗಳು ಉತ್ತರಿಸಿದರು.
ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಎಸ್ಪಿ ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ಶಿಲ್ಪ ನಾಗ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.