×
Ad

ಕಂಬಳಪದವು: ಲಾರಿಗೆ ಢಿಕ್ಕಿ ಹೊಡೆದು ಆಮ್ನಿ ಕಾರು ಪಲ್ಟಿ; ನಾಲ್ವರಿಗೆ ಗಾಯ

Update: 2017-02-20 20:51 IST

ಕೊಣಾಜೆ, ಫೆ.20: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಬಳಿ ಆಮ್ನಿ ಕಾರೊಂದು ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಬಳಿಕ ಪಿಕಪ್ ವಾಹನಕ್ಕೆ ಬಡಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಅಸೈಗೊಳಿಯಲ್ಲಿ ಕೆಎಸ್‌ಆರ್‌ಪಿ ಹೆಡ್‌ಕಾನ್‌ಸ್ಟೇಬಲ್ ಹುದ್ದೆಯಲ್ಲಿರುವ ಮೋಹನ್(50) ಎಂಬವರು ಸುಳ್ಯದ ತಮ್ಮ ಊರಿನಿಂದ ಅಸೈಗೋಳಿಗೆ ಕುಟುಂಬ ಸಮೇತ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ವಾಹನ ಚಲಾಯಿಸುತ್ತಿದ್ದ ಮೋಹನ್ ಸೇರಿದಂತೆ ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರು ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:

ಮೋಹನ್ ಅವರು ಆಮ್ನಿ ಕಾರಿನಲ್ಲಿ ಸುಳ್ಯದಿಂದ ಮುಡಿಪು ಮಾರ್ಗವಾಗಿ ಬರುತ್ತಿದ್ದಾಗ ಎದುರು ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಢಿಕ್ಕಿಹೊಡೆದಿದೆ. ಮುಖಾಮುಖಿ ಢಿಕ್ಕಿಯನ್ನು ತಪ್ಪಿಸುವ ಉದ್ದೇಶದಿಂದ ಲಾರಿ ಚಾಲಕ ಲಾರಿಯನ್ನು ಆದಷ್ಟು ಎಡಭಾಗಕ್ಕೆ ತಿರುಗಿಸಿದರೂ ಕಾರು ಲಾರಿಯ ಬಲಬದಿಗೆ ತಾಗಿ ಸುಮಾರು 20 ಮೀಟರ್‌ನಷ್ಟು ದೂರ ಪಲ್ಟಿಯಾಗಿಕೊಂಡು ಹೋಗಿದೆ.

ಬಳಿಕ ಅದೇ ದಾರಿಯಲ್ಲಿ ಬರುತ್ತಿದ್ದ ಪಿಕಪ್ ವಾಹನಕ್ಕೆ ಬಡಿದು ನಿಂತಿದೆ. ಇದೇ ಸ್ಥಳದಲ್ಲಿ ವಿದ್ಯುತ್ ಕಂಬವೂ ಇದ್ದು ಒಂದು ವೇಳೆ ಪಿಕಪ್ ವಾಹನದ ಬದಲು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರೆ ಇನ್ನಷ್ಟು ಅಪಾಯ ಸಂಭವಿಸುತ್ತಿತ್ತು. ಕಾರು ಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾಗಿದೆ.

ಘಟನೆಯಿಂದ ಕೆಲಹೊತ್ತುವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾ ಎಸೈ ಸುಕುಮಾರನ್, ಶ್ರೀಕಲಾ ಹಾಗೂ ಪೊಲೀಸ್ ಸಿಬ್ಬಂದಿ  ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಘಾತಗಳ ಸರಮಾಲೆ:

ಕಂಬಳಪದವಿನ ಎಕೆ ಮಿಲ್ ಪರಿಸರದಲ್ಲಿ ಇತ್ತೀಚೆಗೆ ರಸ್ತೆಯು ಅಭಿವೃದ್ಧಿಗೊಂಡನಂತರ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಈ ಭಾಗದಲ್ಲಿ ಅತೀ ವೇಗದಲ್ಲಿ ಚಲಿಸುವ ವಾಹನಗಳಿಗೆ ಪೊಲೀಸ್ ಬ್ಯಾರಿಕೇಡ್ ಅಥವಾ ಹಂಪ್ಸ್‌ಗಳನ್ನು ನಿರ್ಮಿಸುವ ಕೆಲಸ ಶೀಘ್ರವೇ ಆಗಬೇಕಿದೆ ಎಂದು ಘಟನಾ ಸ್ಥಳದಲ್ಲಿದ್ದ ಎ.ಕೆ.ಮಿಲ್‌ನ ಅಬ್ದುಲ್ ರಹಿಮಾನ್ ಕೋಡಿಜಾಲ್ ಅವರು ಪೊಲೀಸರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News