ಮೋಹಿತ್ ಸಾಲ್ಯಾನ್ 'ಮಿ.ಉಡುಪಿ-2017'
ಉಡುಪಿ, ಫೆ.20: ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ಎಂಡ್ ಫಿಟ್ನೆಸ್ ಸೆಂಟರ್ ಮತ್ತು ಉಡುಪಿ ಜಿಲ್ಲಾ ದೇಹದಾರ್ಢ್ಯಪಟುಗಳ ಸಂಘದ ಜಂಟಿ ಆಶ್ರಯದಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉಡುಪಿ ಇ-ಫಿಟ್ನೆಸ್ ಕ್ಲಬ್‌ನ ಮೋಹಿತ್ ಸಾಲ್ಯಾನ್ ಉಡುಪಿ 'ಮಿ.ಉಡುಪಿ-2017' ಪ್ರಶಸ್ತಿಗೆ ಭಾಜನರಾದರು.
ಮೋಹಿತ್ ಸಾಲ್ಯಾನ್ ಪ್ರಶಸ್ತಿಯೊಂದಿಗೆ 5,000ರೂ. ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಪಡೆದರು. ರಾಷ್ಟ್ರೀಯ ದೇಹದಾರ್ಢ್ಯ ಪಟು ಅರೀಫ್ ಎಮ್.ಕೆ. ಕುಂದಾಪುರ ಇವರು 'ಮಿ. ಉಡುಪಿ-2017' ಪ್ರಶಸ್ತಿಯನ್ನು ವಿತರಿಸಿದರು.
ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಕುಂದಾಪುರದ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಉದ್ಘಾಟಿಸಿದರು. ಕುಂದಾಪುರ ತಾಪಂ ಸದಸ್ಯ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂತಾರಾಷ್ಟ್ರೀಯ ವೈಟ್‌ಲಿಫ್ಟರ್ ಗುರುರಾಜ್ ಪೂಜಾರಿ ವಂಡ್ಸೆ ಇವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್‌ನ ಅಧ್ಯಕ್ಷ ಗೋವರ್ಧನ ಎನ್. ಬಂಗೇರ, ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ, ಸಂಘಟಕ ನ್ಯೂ ಹರ್ಕ್ಯುಲೆಸ್ ಜಿಮ್ ಎಂಡ್ ಫಿಟ್ನೆಸ್ ಸೆಂಟರ್‌ನ ಸತೀಶ್ ಖಾರ್ವಿ, ರಾಷ್ಟ್ರೀಯ ದೇಹದಾರ್ಢ್ಯ ಪಟು ಸತೀಶ್ ಪೂಜಾರಿ ಹೆಮ್ಮಾಡಿ ಹಾಗೂ ಇತರರು ಉಪಸ್ಥಿತರಿದ್ದರು.
ಗುರುರಾಜ್ ಹಂಗ್ಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.