ಮಂಗಳೂರು: ಕರಾವಳಿಯ ಸೌಹಾರ್ದ ರ‍್ಯಾಲಿ ಬೆಂಬಲಿಸಿ ಬೈಕ್ ರ‍್ಯಾಲಿ
ಮಂಗಳೂರು, ಫೆ. 20: ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕರಾವಳಿ ಜಿಲ್ಲೆಗಳ ಐಕ್ಯತೆ ಹಾಗೂ ಶಾಂತಿಯನ್ನು ಭದ್ರಪಡಿಸಲು ಫೆ.25ರಂದು ನಗರದಲ್ಲಿ ನಡೆಯಲಿರುವ ಕರಾವಳಿ ಸೌಹಾರ್ದ ರ‍್ಯಾಲಿಯನ್ನು ಬೆಂಬಲಿಸಿ ಸಿಪಿಎಂ ಯುವ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಅವರು ಪಕ್ಷದ ಬಾವುಟವನ್ನು ರ‍್ಯಾಲಿಯ ಮುಖಂಡ ಸಂತೋಷ್ ಕುಮಾರ್ ಬಜಾಲ್ ಮತ್ತು ಯೋಗೀಶ್ ಜಪ್ಪಿನಮೊಗರು ಇವರಿಗೆ ಹಸ್ತಾಂತರಿಸುವ ಮೂಲಕ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಾದವ ಶೆಟ್ಟಿ, ಹಲವಾರು ವರ್ಷಗಳಿಂದ ಸಂಘಪರಿವಾರದವರು ಕರಾವಳಿಯಲ್ಲಿ ಅಲ್ಪಸಂಖ್ಯಾಕರ ಮೇಲೆ ಅನಗತ್ಯ ದಾಳಿ, ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಜನರಿಗೆ ಬೇಕಾದುದು ಆಹಾರ, ವಿದ್ಯೆ, ಆರೋಗ್ಯ, ಅಭಿವೃದ್ಧಿ. ಕೇರಳ ರಾಜ್ಯವೇ ಇದಕ್ಕೆ ಮಾದರಿಯೆಂದು ನಮ್ಮ ಜಿಲ್ಲೆಯ ಶಾಸಕರುಗಳೇ ಹೇಳುತ್ತಿದ್ದಾರೆ.
ಕೇರಳದಲ್ಲಿ ದಾಂಧಲೆ ನಡೆಸುವ ಸಂಘ ಪರಿವಾರದ ಶಕ್ತಿಗಳನ್ನು ಅಲ್ಲಿನ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಬಗ್ಗುಬಡಿದಿರುವುದರಿಂದ ಅಲ್ಲಿ ಅಲ್ಪಸಂಖ್ಯಾಕರರಿಗೆ ರಕ್ಷಣೆ ದೊರಕಿದೆ. ಪಿಣರಾಯಿ ವಿಜಯನ್ ಫೆ.25ರಂದು ಮಂಗಳೂರಿನಲ್ಲಿ ನಡೆಯುವ 'ಕರಾವಳಿ ಸೌಹಾರ್ದ ರ‍್ಯಾಲಿ' ಬಹಿರಂಗ ಸಭೆಗೆ ಆಗಮಿಸುತ್ತಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಸಮಿತಿಯ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ, ಯುವಜನ ಮುಖಂಡರಾದ ಬಿ.ಕೆ ಇಮ್ತಿಯಾಝ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಸಿಪಿಎಂ ನಗರ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು.