ಉಡುಪಿ: ಫೆ.26ರಂದು ಜಿಲ್ಲಾ ಕೃಷಿಕ ಸಂಘದಿಂದ 'ರೈತ ಸಮಾವೇಶ'
ಉಡುಪಿ, ಫೆ.20: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ 'ರೈತ ಸಮಾವೇಶ-2017' ಫೆ.26ರ ರವಿವಾರ ಬೆಳಗ್ಗೆ 9:30ರಿಂದ ಸಂಜೆ 3:30 ವರೆಗೆ ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟಪದಲ್ಲಿ ನಡೆಯಲಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಈ ವಿಷಯ ತಿಳಿಸಿದರು. ರೈತ ಸಮಾವೇಶವನ್ನು ಮೂಡುಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ಟ ಅವರು ಉದ್ಘಾಟಿಸಲಿದ್ದಾರೆ. ಅಡಿಕೆ ಪತ್ರಿಕೆ ಸಹ ಸಂಪಾದಕ ನಾ.ಕಾರಂತ ಪೆರಾಜೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಕೃಷಿ ಮತ್ತು ಕೃಷಿ ಸಂಘಟನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಕೃಷಿಕರಾದ ಪುಣಚೂರು ರಾಮಚಂದ್ರ ಭಟ್, ಕರಂಬಳ್ಳಿ ಕೆ.ಮಂಜುನಾಥ ನಾಯಕ್, ವಿಲ್ಪ್ರೇಡ್ ಮೆಂಡೋನ್ಸಾ ಮಣಿಪುರ, ಅಂಜಾರು ಭಾರತಿ ಶೆಟ್ಟಿ ಮತ್ತು ಕೇಂಜ ಶಂಕರ ಪೂಜಾರಿ ಇವರನ್ನು ಸನ್ಮಾನಿಸಲಾಗುವುದು ಎಂದರು.
ಸಮಾವೇಶದಲ್ಲಿ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಂಗಳೂರಿ ನ ಗ್ರೆಗರಿ ಮಥಾಯಸ್ ಅಧ್ಯಕ್ಷತೆಯಲ್ಲಿ ಕೃಷಿಯಲ್ಲಿ ತಂತ್ರಜ್ಞಾನ, ಯಾಂತ್ರೀಕರಣ ಬಳಕೆ ಕುರಿತು ಗೋಷ್ಠಿ ನಡೆಯಲಿದೆ. ಅಪರಾಹ್ನ ಪೇತ್ರಿಯ ಪ್ರಗತಿಪರ ಕೃಷಿಕ ಪೇತ್ರಿ ಶ್ಯಾಮ್‌ಪ್ರಸಾದ್ ಭಟ್ ಅಧ್ಯಕ್ಷತೆಯಲ್ಲಿ ಎರಡನೇ ಗೋಷ್ಠಿ ನಡೆಯಲಿದೆ. ಕೃಷಿ ಪದ್ಧತಿ,ಜೈವಿಕ ಗೊಬ್ಬರ ಬಳಕೆ, ಕೀಟ ನಿರ್ವಹಣೆ ಕುರಿತು ಉಪನ್ಯಾಸವಿರುತ್ತದೆ.
ಅಪರಾಹ್ನ 1:45ರಿಂದ ಮೂರನೇ ಗೋಷ್ಠಿ ದ.ಕ. ಹಾಲು ಉತ್ಪಾದಕರ ಒಕ್ಕೂಟದ ರವಿರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಳಿಗಳ ವೈವಿಧ್ಯತೆ ಶುಧ್ಧ ಹಾಲಿನ ಉತ್ಪಾದನೆ, ಹೈನುಗಾರಿಕೆಯಲ್ಲಿ ಹಸಿರು ಮೇವಿನ ಬಳಕೆ ಕುರಿತ ಉಪನ್ಯಾಸವಿರುತ್ತದೆ ಪ್ರಖ್ಯಾತ ಆಯುರ್ವೇದ ತಜ್ಞ ಡಾ. ಶ್ರೀಧರ ಬಾಯರಿ ಔಷಧಿ ಸಸ್ಯಗಳಿಂದ ಆರೋಗ್ಯವರ್ಧನೆ ಕುರಿತು ಮಾತನಾಡಲಿದ್ದಾರೆ.
ಆ ಬಳಿಕ ಸರಕಾರಿ ಇಲಾಖೆಗಳ ರೈತಪರ ಯೋಜನೆಗಳ ಕುರಿತು ಉಡುಪಿ ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಕೃಷಿ, ಕಂದಾಯ, ತೋಟಗಾರಿಕೆ, ಅರಣ್ಯ ಇಲಾಖೆಗಳ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗುವುದು. ಕೃಷಿಕರ ನಿರ್ಣಯ ಮಂಡನೆಯನ್ನು ಕೃಷಿಕ ಸಂಘದ ಪಾಂಡುರಂಗ ನಾಯಕ್ ಹಿರಿಯಡ್ಕ ಮಾಡಲಿದ್ದಾರೆ ಎಂದು ರಾಮಕೃಷ್ಣ ಶರ್ಮ ತಿಳಿಸಿದರು.
ರೈತ ಸಮಾವೇಶದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು, ಕೃಷಿ ಸಲಕರಣೆ ಗಳು, ಕೃಷಿ ಸಂಬಂಧಿ ಪತ್ರಿಕೆಗಳು, ವಿವಿಧ ತಳಿಯ ಬೀಜ, ಗಿಡಗಳು ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. ಕಡಿಮೆ ವೆಚ್ಚದಲ್ಲಿ ಲಾಭದಾಯಕ ಕೃಷಿ ಮಾಡುವ ಬಗ್ಗೆ, ಕೃಷಿ ಸಮಸ್ಯೆಗಳ ಬಗ್ಗೆ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ಸಾಧಕರು ಒಟ್ಟಾಗಿ ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ ಹೆರ್ಗ ಹಾಗೂ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಉಪಸ್ಥಿತರಿದ್ದರು.