ಹಿಟ್ಲರ್ ಬಳಸಿದ್ದ ಫೋನ್ 1.63 ಕೋಟಿ ರೂ.ಗೆ ಹರಾಜು
ವಾಶಿಂಗ್ಟನ್, ಫೆ. 20: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಳಸಿದ್ದ ಖಾಸಗಿ ಟೆಲಿಫೋನೊಂದು ರವಿವಾರ ನಡೆದ ಹರಾಜಿನಲ್ಲಿ 2.43 ಲಕ್ಷ ಡಾಲರ್ (ಸುಮಾರು 1.63 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ. ಈ ಫೋನನ್ನು ಸರ್ವಾಧಿಕಾರಿಯು ಎರಡನೆ ಮಹಾಯುದ್ಧ ಅವಧಿಯಲ್ಲಿ ಹಲವಾರು ಆದೇಶಗಳನ್ನು ನೀಡಲು ಬಳಸಿದ್ದರು ಎನ್ನಲಾಗಿದೆ.
ಮೂಲತಃ ಕಪ್ಪು ಬಕಲೈಟ್ ಫೋನ್‌ಗೆ ಬಳಿಕ ಕೆಂಪು ಬಣ್ಣವನ್ನು ಬಳಿಯಲಾಯಿತು ಹಾಗೂ ಅದರಲ್ಲಿ ಹಿಟ್ಲರ್ ಹೆಸರನ್ನು ಕೊರೆಯಲಾಯಿತು.
ಎರಡನೆ ಮಹಾಯುದ್ಧದಲ್ಲಿ ಜರ್ಮನಿಗೆ ಸೋಲಾದ ಬಳಿಕ ಹಿಟ್ಲರ್‌ರ ಬರ್ಲಿನ್‌ನಲ್ಲಿರುವ ಬಂಕರ್‌ನಲ್ಲಿ 1945ರಲ್ಲಿ ಈ ಫೋನ್ ಪತ್ತೆಯಾಯಿತು.
ಹರಾಜು ನಡೆಸಿದ ‘ಅಲೆಕ್ಸಾಂಡರ್ ಹಿಸ್ಟೋರಿಕಲ್ ಆಕ್ಷನ್ಸ್’ ಫೋನ್‌ನ ವೌಲ್ಯವನ್ನು 2 ಲಕ್ಷ ಡಾಲರ್ (ಸುಮಾರು 1.34 ಕೋಟಿ ರೂಪಾಯಿ) ಮತ್ತು 3 ಲಕ್ಷ ಡಾಲರ್ (ಸುಮಾರು 2 ಕೋಟಿ ರೂಪಾಯಿ) ನಡುವೆ ನಿಗದಿಪಡಿಸಿತ್ತು. ಆರಂಭಿಕ ಬಿಡ್ಡನ್ನು 1 ಲಕ್ಷ ಡಾಲರ್ (ಸುಮಾರು 67 ಲಕ್ಷ ರೂಪಾಯಿ)ಗೆ ನಿಗದಿಗೊಳಿಸಿತ್ತು.
ಖರೀದಿದಾರರ ಹೆಸರನ್ನು ಹರಾಜು ಸಂಸ್ಥೆ ಬಹಿರಂಗಪಡಿಸಿಲ್ಲ.
ಸೀಮನ್ಸ್ ಕಂಪೆನಿಯ 70 ವರ್ಷಗಳಿಗೂ ಹಳೆಯ ರೋಟರಿ ಟೆಲಿಫೋನ್‌ನಲ್ಲಿ ಸ್ವಸ್ತಿಕ ಮತ್ತು ‘ತರ್ಡ್ ರೀಕ್’ನ್ನು ಸಂಕೇತಿಸುವ ಹದ್ದುವಿನ ಚಿತ್ರವನ್ನು ಕೆತ್ತಲಾಗಿದೆ.