ಪಾಕ್ ಪಡೆಗಳ ಕಾರ್ಯಾಚರಣೆ: ಕನಿಷ್ಠ 130 ಶಂಕಿತ ಉಗ್ರರ ಹತ್ಯೆ
Update: 2017-02-20 22:13 IST
ಲಾಹೋರ್, ಫೆ. 20: ಪಾಕಿಸ್ತಾನದಲ್ಲಿ ಕಳೆದ ವಾರ ನಡೆದ ಸರಣಿ ಆತ್ಮಹತ್ಯಾ ಬಾಂಬ್‌ಗಳ ಹಿನ್ನೆಲೆಯಲ್ಲಿ, ದೇಶವ್ಯಾಪಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು 130ಕ್ಕೂ ಅಧಿಕ ಶಂಕಿತ ಭಯೋತ್ಪಾದಕರನ್ನು ಕೊಂದಿವೆ ಹಾಗೂ 350ಕ್ಕೂ ಅಧಿಕ ಮಂದಿಯನ್ನು ಬಂಧಿಸಿವೆ. ಬಂಧಿತರಲ್ಲಿ ಹೆಚ್ಚಿನವರು ಅಫ್ಘಾನಿಸ್ತಾನೀಯರು.
ಪಾಕಿಸ್ತಾನಿ ಪಡೆಗಳು ರವಿವಾರ ಅಫ್ಘಾನ್ ಗಡಿಯಾಚೆಗೆ ಗುರಿಯಿರಿಸಿ ನಡೆಸಲಾದ ದಾಳಿಯಲ್ಲಿ ಕನಿಷ್ಠ 15 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ‘ಜಿಯೊ ನ್ಯೂಸ್’ ವರದಿ ಮಾಡಿದೆ.
ಭಯೋತ್ಪಾದಕರ ನೇಮಕಾತಿ ನಡೆಸುವ ಹಾಗೂ ಆತ್ಮಹತ್ಯಾ ಬಾಂಬರ್‌ಗಳಿಗೆ ತರಬೇತಿ ನೀಡುವ ಸ್ಥಳವೊಂದನ್ನು ಇನ್ನೊಂದು ದಾಳಿಯಲ್ಲಿ ಪುಡಿಗೈಯ್ಯಲಾಯಿತು ಹಾಗೂ ಕನಿಷ್ಠ 12 ಭಯೋತ್ಪಾದಕ ಆಶ್ರಯತಾಣಗಳನ್ನು ನಾಶಪಡಿಸಲಾಯಿತು ಎಂದು ಅದು ತಿಳಿಸಿದೆ.
ಪಾಕಿಸ್ತಾನದ ವಾಯುವ್ಯ ಬುಡಕಟ್ಟು ವಲಯದಲ್ಲಿ, ಭದ್ರತಾ ಪಡೆಗಳೊಂದಿಗೆ ನಡೆದ ಹೋರಾಟದಲ್ಲಿ ಕನಿಷ್ಠ 11 ಅಫ್ಘಾನ್ ಭಯೋತ್ಪಾದಕರು ಮೃತಪಟ್ಟರು.