ಇರಾಕ್‌ನ ತೈಲ ನಮಗೆ ಬೇಡ : ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್
ಬಗ್ದಾದ್, ಫೆ. 20: ಇರಾಕ್‌ನ ಪೆಟ್ರೋಲಿಯಂ ನಿಕ್ಷೇಪಗಳನ್ನು ಕೊಳ್ಳೆಹೊಡೆಯುವ ಉದ್ದೇಶವನ್ನು ಅಮೆರಿಕ ಹೊಂದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಸೋಮವಾರ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆಗಳಿಂದ ನೊಂದಿರುವ ಅಮೆರಿಕದ ಭಾಗೀದಾರರನ್ನು ಸಂತೈಸುವುದಕ್ಕಾಗಿ ಪ್ರವಾಸ ಕೈಗೊಂಡಿರುವ ಮ್ಯಾಟಿಸ್ ಸೋಮವಾರ ಬಗ್ದಾದ್‌ಗೆ ಆಗಮಿಸಿದ್ದಾರೆ.
ಅಮೆರಿಕದ ಸೇನೆ ಎಂಟು ವರ್ಷಗಳ ಕಾಲ ಇರಾಕ್‌ನಲ್ಲಿ ನೆಲೆಯೂರಿತ್ತು.
ಇರಾಕ್‌ನಲ್ಲಿ ನಡೆಸಿದ ಯುದ್ಧದ ಖರ್ಚನ್ನು ವಸೂಲು ಮಾಡಲು ಹಾಗೂ ಭಯೋತ್ಪಾದಕ ಗುಂಪು ಐಸಿಸ್‌ಗೆ ಅದರ ಪ್ರಧಾನ ಆದಾಯ ಮೂಲವನ್ನು ನಿರಾಕರಿಸಲು ಇರಾಕಿ ತೈಲವನ್ನು ಅಮೆರಿಕ ವಶಪಡಿಸಿಕೊಳ್ಳಬೇಕಿತ್ತು ಎಂಬುದಾಗಿ ಟ್ರಂಪ್ ಚುನಾವಣಾ ಪ್ರಚಾರ ಸಮಯದಲ್ಲಿ ಹಾಗೂ ಚುನಾವಣೆಯ ಬಳಿಕವೂ ಪದೇ ಪದೇ ಹೇಳುತ್ತಾ ಬಂದಿದ್ದರು.
ನಿವೃತ್ತ ಮರೀನ್ ಜನರಲ್ ಮ್ಯಾಟಿಸ್, 2003ರ ಇರಾಕ್ ದಾಳಿಯ ಸಂದರ್ಭದಲ್ಲಿ ಅಮೆರಿಕದ ಸೇನೆಯನ್ನು ಮುನ್ನಡೆಸಿದ್ದರು.
‘‘ಅಮೆರಿಕದಲ್ಲಿರುವ ನಾವೆಲ್ಲರೂ ಅನಿಲ ಮತ್ತು ತೈಲಕ್ಕೆ ಸಾಮಾನ್ಯವಾಗಿ ಹಣ ನೀಡುತ್ತಲೇ ಬಂದಿದ್ದೇವೆ. ಮುಂದೆಯೂ ನಾವು ಹೀಗೆ ಮಾಡುವುದನ್ನು ಮುಂದುವರಿಸುತ್ತೇವೆ ಎನ್ನುವುದೂ ಖಚಿತ’’ ಎಂದು ಇರಾಕ್ ಪ್ರವಾಸದ ಆರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮ್ಯಾಟಿಸ್ ನುಡಿದರು.
‘‘ಯಾರದೇ ತೈಲವನ್ನು ವಶಪಡಿಸಿಕೊಳ್ಳಲು ನಾವು ಇರಾಕ್‌ನಲ್ಲಿ ಇಲ್ಲ’’ ಎಂದರು.
ಕಳೆದ ತಿಂಗಳು ಸಿಐಎ ಪ್ರಧಾನಕಚೇರಿಯಲ್ಲಿ ಮಾತನಾಡಿದ ಟ್ರಂಪ್, ನಾಣ್ನುಡಿಯೊಂದನ್ನು ಉಲ್ಲೇಖಿಸುತ್ತಾ, ‘ಕೊಳ್ಳೆ ಹೊಡೆದ ವಸ್ತುಗಳು ಗೆದ್ದವನದು’ ಎಂದು ಹೇಳಿದ್ದರು. ತನ್ನ ಪೂರ್ವಾಧಿಕಾರಿ ಬರಾಕ್ ಒಬಾಮರ ಆಡಳಿತದಲ್ಲಿ ಅಮೆರಿಕದ ಹೆಚ್ಚಿನ ಸೈನ್ಯವನ್ನು ಇರಾಕ್‌ನಿಂದ ವಾಪಸ್ ಕರೆಸಿದ ಬಳಿಕ, ತೈಲವನ್ನು ಅಮೆರಿಕ ಉಳಿಸಿಕೊಳ್ಳಬೇಕಿತ್ತು ಎಂದಿದ್ದರು.
‘‘ಬಹುಶಃ ನಮಗೆ ಇನ್ನೊಂದು ಅವಕಾಶ ಸಿಗಬಹುದು’’ ಎಂದೂ ಹೇಳಿದ್ದರು. ಆದರೆ, ಅದೇನೆಂದು ವಿವರಿಸಲಿಲ್ಲ.