ಐಪಿಎಲ್ ಹರಾಜು : 2.60 ಕೋಟಿ ಪಡೆದ ವೇಗಿ ಮುಹಮ್ಮದ್ ಸಿರಾಜ್ ತನ್ನ ಆಟೋ ಚಾಲಕ ತಂದೆಯ ಬಗ್ಗೆ ಹೇಳಿದ್ದೇನು ಗೊತ್ತೇ ?

Update: 2017-02-20 17:33 GMT

 ಹೈದರಾಬಾದ್, ಫೆ.20: ಐಪಿಎಲ್ ಸನ್ ರೈಸರ್ಸ್‌ ಹೈದರಾಬಾದ್ ತಂಡಕ್ಕೆ 2.60 ಕೋಟಿ ರೂ.ಗೆ ಸೇರ್ಪಡೆಗೊಂಡಿರುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ತನ್ನ ತಂದೆ ಮುಹಮ್ಮದ್ ಗೌಸ್ ಮತ್ತು ತಾಯಿ ಶಬನಾ ಬೇಗಮ್ ಅವರಿಗೆ ಹೈದರಾಬಾದ್‌ನಲ್ಲಿ ಮನೆಯೊಂದನ್ನು ಖರೀದಿಸಿ ಕೊಡುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ್ದ ಪ್ರದರ್ಶನ ಅವರಿಗೆ ಭಾರತ ‘ಎ’ ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ನೀಡಿತ್ತು. ಇದೀಗ ಅವರಿಗೆ ದೊಡ್ಡ ಮೊತ್ತಕ್ಕೆ ಐಪಿಎಲ್‌ಗೆ ಕಾಲಿರಿಸಲು ಅವಕಾಶ ಮಾಡಿಕೊಟ್ಟಿದೆ. 

‘‘ ಕ್ಲಬ್ ಮ್ಯಾಚ್‌ನಲ್ಲಿ ಆಡುವಾಗ 25 ಓವರ್‌ಗಳ ಪಂದ್ಯವೊಂದರಲ್ಲಿ 20 ರನ್‌ಗೆ ಎದುರಾಳಿ ತಂಡದ 9 ವಿಕೆಟ್‌ಗಳನ್ನು ಪಡೆದಾಗ ನನ್ನ ಚಿಕ್ಕಪ್ಪ ತುಂಬಾ ಖುಶಿಯಿಂದ 500 ರೂ. ಬಹುಮಾನ ನೀಡಿದ್ದರು. ಆಗ ನನಗೆ ಆನಂದ ಉಂಟಾಗಿತ್ತು. ಈಗ ಅದೇ ಸಂತಸ ನನಗೆ ಆಗಿದೆ. 2.60 ಕೋಟಿ ರೂ. ನನಗೆ ದೊರೆಯುವಂತಾಗಿದೆ’’ ಎಂದು ಸಿರಾಜ್ ಸುದ್ದಿಗಾರರಿಗೆ ತಿಳಿಸಿದರು.
ಮಧ್ಯಮ ವರ್ಗದ ಕುಟುಂಬದಿಂದ  ಬಂದ ಸಿರಾಜ್ ತಾನು ಈ ಮಟ್ಟಕ್ಕೆ ಬೆಳೆಯಲು ತನ್ನ ತಂದೆ ಮತ್ತು ತಾಯಿಯ ತ್ಯಾಗ ಮತ್ತು ಪರಶ್ರಮವನ್ನು ನೆನಪಿಸಿಕೊಳ್ಳುತ್ತಾರೆ. ತಂದೆ ರಿಕ್ಷಾ ಚಾಲಕನಾಗಿದ್ದರೂ, ಕುಟುಂಬದ ಆರ್ಥಿಕ ಒತ್ತಡ ನನ್ನ ಹಾಗೂ ಅಣ್ಣನ ಮೇಲೆ ಆಗದಂತೆ ಎಚ್ಚರ ವಹಿಸಿದ್ದರು.

ನನ್ನ ಹೆತ್ತವರು ಕಠಿಣ ದಿನಗಳನ್ನು ಎದುರಿಸಿದ್ದರು. ಇವತ್ತು ಅವರಿಗೆ ಆ ಪರಿಸ್ಥಿತಿ ದೂರವಾಗಿದೆ. ನನ್ನ ಅಣ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ನನಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ.ಆಗ ತಾಯಿ ನನಗೆ ಅಣ್ಣನಂತೆ ಕಲಿಯುವಂತೆ ಹೇಳುತ್ತಿದ್ದರು. ಆದರೆ ನನಗೆ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಇವತ್ತು ಆಕೆ ನನ್ನ ಯಶಸ್ಸಿನಿಂದ ಸಂತಸಗೊಂಡಿದ್ದಾರೆ’’ ಎಂದು ಹೇಳಿದರು.
‘‘ ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆರಂಭಿಸಿ ವೇಗದ ಬೌಲಿಂಗ್‌ನ ಬಗ್ಗೆ ಸಾಕಷ್ಟು ಕಲಿತುಕೊಂಡೆ. ಬಳಿಕ ಹೈದರಾಬಾದ್ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡದಲ್ಲಿ ಆಡಿದ ನನಗೆ ಭಾರತ ‘ಎ’ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಅಲ್ಲಿ ನೀಡಿದ ಪ್ರದರ್ಶನ ಐಪಿಎಲ್‌ನಲ್ಲಿ ಸ್ಥಾನ ಪಡೆಯಲು ನೆರವಾಗಿದೆ. ಇದೀಗ ಐಪಿಎಲ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಹಾದಿಯಲ್ಲಿದ್ದಾರೆ.
ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ಧಾರೆ. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡದ ಮೂಲಕ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ ಸಿರಾಜ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News