ಮಂಗಳೂರು: ಶಿವಾಜಿ ಜಯಂತಿಯಲ್ಲಿ ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಶಾಸಕ ಲೋಬೊ
ಮಂಗಳೂರು, ಫೆ.20: ಯಾವ ಸಮುದಾಯಕ್ಕೂ ನೋವನ್ನುಂಟು ಮಾಡುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ನಗರದಲ್ಲಿ ರವಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಯೊಂದರ ಕುರಿತು ಉಂಟಾಗಿರುವ ವಿವಾದಕ್ಕೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕಾಶಿಯಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಮಥುರಾದಲ್ಲಿ ಹಿಂದೂ ದೇವಸ್ಥಾನಗಳು ಉಳಿಯಬೇಕಾದರೆ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿತ್ತು ಎಂಬರ್ಥದಲ್ಲಿ ಶಿವಾಜಿ ಸಮಕಾಲೀನ ಕವಿ ಭೂಷಣ್ ಎಂಬವರ ಮಾತನ್ನು ಉಲ್ಲೇಖಿಸಿ ನಾನು ಮಾತನಾಡಿದ್ದೆ. ನನ್ನ ಹೇಳಿಕೆಯು ಯಾವ ಸಮುದಾಯವನ್ನೂ ನೋವು ಮಾಡುವ ಉದ್ದೇಶದಿಂದ ಕೂಡಿರಲಿಲ್ಲಿ. ಎಲ್ಲ ಸಮುದಾಯದವರನ್ನೂ ಸಮಾನ ದೃಷ್ಟಿಯಿಂದ ನೋಡಿದ್ದೇನೆ. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸ್ಥಾನದಲ್ಲಿದ್ದುಕೊಂಡು ಇನ್ನೊಂದು ವರ್ಗದ ಅಲ್ಪಸಂಖ್ಯಾತರನ್ನು ನೋವಿಸಲು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.