ವಿದ್ಯಾರ್ಥಿನಿಯರ ಅಪಹರಣ ಪ್ರಕರಣ; ಆರೋಪಿಯೊಬ್ಬನ ಬಂಧನ
ಮಂಗಳೂರು, ಫೆ.20: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.11ರಂದು ಇಬ್ಬರು ವಿದ್ಯಾರ್ಥಿನಿಯರಿಬ್ಬರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪುತ್ತೂರಿನ ಶಂಕರ್ ಭಟ್ (33) ಎಂಬಾತನನ್ನು ಬಂಧಿಸಿದ್ದಾರೆ.
ಟ್ಯುಟೋರಿಯಲ್ ಸಂಸ್ಥೆಯೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ಹರೆಯದ ವಿದ್ಯಾರ್ಥಿನಿಯರು ದಿಢೀರ್ ಕಾಣೆಯಾಗಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಕದ್ರಿ ಠಾಣಾ ಪೊಲೀಸರಿಗೆ ವಿದ್ಯಾರ್ಥಿನಿಯರಿಬ್ಬರು ಮಡಿಕೇರಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಮಂಗಳೂರಿಗೆ ಕರೆ ತಂದು ಮನೆಗೆ ಒಪ್ಪಿಸಿದ್ದರು. ಮನೆಯಲ್ಲಿ ಬೈದಿದ್ದರಿಂದ ನಾವು ಕೆಲಸ ಹುಡುಕಿಕೊಂಡು ಮಡಿಕೇರಿಗೆ ಹೋಗಿದ್ದೆವು. ಅಲ್ಲಿ ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆವು ಎಂದು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದರು.
ಆದರೆ, ಈ ವಿದ್ಯಾರ್ಥಿನಿಯರು ಅಪ್ರಾಪ್ತ ವಯಸ್ಕರಾಗಿದ್ದರಿಂದ ಅವರನ್ನು ಅಂಗಡಿಯಲ್ಲಿ ಕೆಲಸಕ್ಕಿಟ್ಟುಕೊಂಡ ಆರೋಪದ ಮೇಲೆ ಶಂಕರ ಭಟ್ ಅವರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಸ್ತುತ, ಈ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.