ಉಡುಪಿ: 23ರಂದು ಮುಖ್ಯಶಿಕ್ಷಕಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ
ಉಡುಪಿ, ಫೆ.20: ಕಲ್ಯಾಣಪುರ ವೌಂಟ್ ರೊಜಾರಿಯೋ ಹೈಸ್ಕೂಲಿನ ದಲಿತ ದೈಹಿಕ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡಿ ರುವ ಮುಖ್ಯ ಶಿಕ್ಷಕಿ ಸಿಸ್ಟರ್ ರೆಜಿನಾ ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಫೆ.23ರಂದು ಶಾಲೆಯ ಎದುರು ಪ್ರತಿ ಭಟನೆ ನಡೆಸಲಿವೆ ಎಂದು ದಸಂಸ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆಯ ಸಂಚಾ ಲಕ ರಮೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ದೈಹಿಕ ಶಿಕ್ಷಕ ನಾಗರಾಜ್‌ಗೆ ಮುಖ್ಯ ಶಿಕ್ಷಕಿ ನಿರಂತರ ಕಿರುಕುಳ, ಮಾನಸಿಕ ಹಿಂಸೆ ನೀಡಿ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಬೇಸತ್ತ ನಾಗ ರಾಜ್ ಆತ್ಮಹತ್ಯೆಗೆ ಯತ್ನಿಸಿ ಇದೀಗ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ನಾಗರಾಜ್‌ರನ್ನು ಕೆಲಸದಿಂದ ವಜಾಗೊಳಿಸುವ ಹುನ್ನಾರವನ್ನು ನಡೆಸಲಾಗುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ವಿಶ್ವನಾಥ್ ಪೇತ್ರಿ, ಕರವೇ ಮುಖಂಡ ರಮೇಶ್ ಶೆಟ್ಟಿ, ಸುನೀಲ್ ಪೂಜಾರಿ, ವಿನೋದ್ ಕುಮಾರ್, ಪ್ರಶಾಂತ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.