ಬೃಹತ್ ದಲಿತ-ಮುಸ್ಲಿಂ-ಬಹುಜನ ಜಾಥಾ
ತಿರುವನಂತಪುರಂ,ಫೆ.20: ಕೇರಳದ ಇತಿಹಾಸದಲ್ಲೇ ಅತ್ಯಂತ ಬೃಹತ್ ಮಟ್ಟದ ದಲಿತ-ಮುಸ್ಲಿಂ-ಬಹುಜನ ಪ್ರತಿಭಟನೆ, ‘ಚಲೋ ತಿರುವನಂತಪುರಂ’ ನಡೆಸಲು ರಾಜ್ಯದ 50 ಸಾಮಾಜಿಕ ಸಂಘಟನೆಗಳು ನಿರ್ಧರಿಸಿವೆ.
ಭೂರಹಿತ ದಲಿತರು, ಆದಿವಾಸಿಗಳು ಹಾಗೂ ಬಹುಜನ ಸಮುದಾಯಗಳ ಸಮಸ್ಯೆಗಳ ಬಗ್ಗೆ ಈ ಚಳವಳಿಯು ಸರಕಾರದ ಗಮನಸೆಳೆಯಲಿದೆ ಹಾಗೂ ಈ ಸಮುದಾಯಗಳನ್ನು ನಿರ್ದಿಷ್ಟ ಕಾಲನಿಗಳಲ್ಲಿ ನೆಲೆಗೊಳಿಸುವ ಪದ್ಧತಿಯನ್ನು ಕೈಬಿಡುವಂತೆಯೂ ಆಗ್ರಹಿಸಲಿದೆಯೆಂದು ಸಂಘಟಕರು ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ನಡೆದ ಉನಾ ಚಳವಳಿ ಹಾಗೂ ಕರ್ನಾಟಕದಲ್ಲಿ ನಡೆದ ಉಡುಪಿ ಚಲೋ ಚಳವಳಿಯ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 1ರಂದು ಕಾಸರಗೋಡಿನಲ್ಲಿ , ‘ಚಲೋ ತಿರುವನಂತಪುರಂ’ ರ್ಯಾಲಿ ಆರಂಭಗೊಳ್ಳಲಿದ್ದು ಮೇ 31ರಂದು ತಿರುವನಂತಪುರಂನಲ್ಲಿ ಸಮಾರೋಪಗೊಳ್ಳಲಿದೆ.
2007ರಲ್ಲಿ ಭೂರಹಿತರ ಬಂಡಾಯಕ್ಕೆ ಸಾಕ್ಷಿಯಾದ ಕೇರಳದ ಚೆಂಗರದಲ್ಲಿ ಈ ವರ್ಷದ ಜನವರಿ 29ರಂದು ನಡೆದ ಮುಷ್ಕರದ ವೇಳೆ ದಲಿತ ನಾಯಕ ಜಿಗ್ನೇಶ್ ಮೆವಾನಿ ತಿರುವನಂತಪುರಂ ಚಲೋ ನಡೆಸುವ ನಿರ್ಧಾರವನ್ನು ಪ್ರಕಟಿಸಿದ್ದರು.
‘‘ಕೇರಳ ಮಾದರಿಯ ಅಭಿವೃದ್ಧಿಯ ಹಿಂದೆ ನಡೆಯುವ ದಲಿತರ ಶೋಷಣೆಯನ್ನು ಬಯಲಿಗೆಳೆಯಲು ಕಾಲ ಈಗ ಸನ್ನಿಹಿತವಾಗಿದೆ. ಈ ಹೋರಾಟದಲ್ಲಿ ಎಡಪಂಥೀಯರು ಸೇರಿದಂತೆ ಸಮಾನಮನಸ್ಕರನ್ನು ಒಗ್ಗೂಡಿಸಲಾಗುವುದು’’ ಎಂದು ಜಿಗ್ನೇಶ್ ಘೋಷಿಸಿದ್ದರು.
ಕೇರಳವು ದೇಶದಲ್ಲೇ ಅತ್ಯಧಿಕ ಅಂದರೆ ಶೇ.94ರಷ್ಟು ಸಾಕ್ಷರತೆ, ಅಧಿಕ ಜೀವಿತಾವಧಿ ಹಾಗೂ ಭೂಸುಧಾರಣೆಯನ್ನು ಸಾಧಿಸಿದ ರಾಜ್ಯವೆಂಬ ದಾಖಲೆಯನ್ನು ನಿರ್ಮಿಸಿದೆ. ಆದಾಗ್ಯೂ, ಈ ಮಾದರಿಯಲ್ಲಿ ದಲಿತರು, ಆದಿವಾಸಿಗಳು ಹಾಗೂ ಮೀನುಗಾರ ಸಮುದಾಯಗಳು ಹೊರಗಿಡಲಾಗಿದೆಯೆಂದು ಟೀಕಿಸಲಾಗುತ್ತಿದೆ.
ಈ ಮಧ್ಯೆ ಚಲೋ ತಿರುವನಂತಪುರಂ ಚಳವಳಿಯು ದಲಿತ-ಮುಸ್ಲಿಂ-ಬಹುಜನ ಸಮುದಾಯಗಳ ಬೃಹತ್ ಒಕ್ಕೂಟ ರಚನೆಗೆ ನಾಂದಿಯಾಗುವ ನಿರೀಕ್ಷೆಯಿದೆ. ಈ ಮಧ್ಯೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಉಪಾಧ್ಯಕ್ಷ ಕುಟ್ಟಿ ಅಹ್ಮದ್ ಕುಟ್ಟಿ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಚಲೋ ತಿರುವನಂತಪುರಂ ಯಶಸ್ವಿಯಾಗಲು ತಮ್ಮ ಪಕ್ಷವು ಸಕಲ ಸಹಕಾರ ನೀಡಲಿದೆಯೆಂದು ತಿಳಿಸಿದ್ದಾರೆ. ದಲಿತ-ಮುಸ್ಲಿಂ-ಬಹುಜನ ಏಕತೆಯು ಸಮಾನ ನ್ಯಾಯದ ಪರಿಕಲ್ಪನೆಯನ್ನು ಆಧರಿಸಿದೆಯೆಂದು ಭೂ ಅಧಿಕಾರ ಸಂರಕ್ಷಣಾ ಸಮಿತಿಯ ನಾಯಕರಲ್ಲೊಬ್ಬರಾದ ಸುನ್ನಿ ಎಂ. ಕಾಪಿಕ್ಕಾಡ್ ತಿಳಿಸಿದ್ದಾರೆ.ಮೂಲಭೂತವಾದ ಹಾಗೂ ಹಿಂದುತ್ವದ ಕಾರ್ಯಸೂಚಿಯ ವಿರುದ್ಧ ಜಾತಿ ವಿರೋಧಿ ಹಾಗೂ ಜಾತ್ಯತೀತ ಶಕ್ತಿಗಳಷ್ಟೇ ಹೋರಾಡಲು ಸಾಧ್ಯವೆಂದು ಅವರು ಹೇಳಿದ್ದಾರೆ.
ಆದರೆ ಈ ಬೃಹತ್ ಪ್ರತಿಭಟನಾ ರ್ಯಾಲಿಯ ಕುರಿತು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೇರಳದ ಖ್ಯಾತ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸಿ.ಕೆ.ಜಾನು ಗೈರುಹಾಜ ರಾಗಿದ್ದರು. ಆದರೆ ತನಗೆ ಈ ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ ಯಾರೂ ತನ್ನನ್ನು ಸಂಪರ್ಕಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.