ಏಕದೇವಾರಾಧನೆಯೇ ಇಸ್ಲಾಮಿನ ತಳಹದಿ: ಬಾದುಶಾ ಬಾಖವಿ
ಮಂಗಳೂರು. ಫೆ.21: ಸೃಷ್ಟಿಕರ್ತನೂ ಸಂರಕ್ಷಕನೂ ಅಲ್ಲಾಹನ ಧರ್ಮವಾದ ಇಸ್ಲಾಮಿನ ತಳಹದಿ ಏಕದೇವಾರಾಧನೆಯಾಗಿದೆ. ಆರಾಧನೆಯ ಎಲ್ಲಾ ಪ್ರಕಾರಗಳನ್ನು ಅಲ್ಲಾಹನಿಗೆ ಮಾತ್ರ ಸಮರ್ಪಿಸುವುದೇ ಏಕದೇವಾರಾಧನೆ. ಅಲ್ಲಾಹನಿಗೆ ಸಹಭಾಗಿಗಳಾಗಲಿ, ಸರಿಸಮಾನರಾಗಲಿ ಅವತಾರಗಳಾಗಲಿ, ಮಧ್ಯವರ್ತಿಗಳಾಗಲಿ ಇಲ್ಲ. ಆದ್ದರಿಂದ ಸಕಲ ಮಾನವರನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ಅಲ್ಲಾಹನಿಗೆ ಶರಣಾಗತರಾಗುವುದೇ ಇಸ್ಲಾಮಿನ ಏಕದೇವಾರಾಧನಾ ಸಿದ್ಧಾಂತದ ತಿರುಳು ಎಂದು ಪ್ರಸಿದ್ಧ ವಿದ್ವಾಂಸ ಮೌಲಾವಿ ಬಾದುಶಾ ಬಾಖವಿ ಹೇಳಿದರು.
ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಹಮ್ಮಿಕೊಂಡಿರುವ ಕುರ್ ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಂನ ವಿದ್ಯಾರ್ಥಿ ಮತ್ತು ಯುವಜನ ಘಟಕವಾದ ಸಲಫಿ ಸ್ಟೂಡೆಂಟ್ಸ್ ಮೂವ್ ಮೆಂಟ್ (ಎಸ್.ಎಸ್.ಎಂ) ವತಿಯಿಂದ ಕುದ್ರೋಳಿಯ ಎ ಒನ್ ಭಾಗ್ ಬಳಿ ಆಯೋಜಿಸಲಾದ ಧಾರ್ಮಿಕ ಸಮಾವೇಶದಲ್ಲಿ ಸಮಾರೋಪ ಸಂದೇಶ ನೀಡಿ ಅವರು ಮಾತನಾಡಿದರು. ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಕುದ್ರೋಳಿ ಘಟಕದ ಅಧ್ಯಕ್ಷ ನಾಸಿರುದ್ದೀನ್ ಹೈಕೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಎಸ್.ಎಂನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್, ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ, ಕಾರ್ಯದರ್ಶಿ ಎಂ.ಜಿ ಮುಹಮ್ಮದ್, ಸಲಫಿ ಸ್ಟೂಡೆಂಟ್ಸ್ ಮೂವ್ ಮೆಂಟ್( ಎಸ್.ಎಸ್.ಎಂ)ನ ಕುದ್ರೋಳಿ ಘಟಕ ಅಧ್ಯಕ್ಷ ಶಾಹಿಫ್ ಕುದ್ರೋಳಿ, ಉಪಾಧ್ಯಕ್ಷ ಸರ್ಫಾರಾಝ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು. ಖ್ಯಾತ ಬ್ಯಾರಿ ವಾಗ್ಮಿ ಜನಾಬ್ ಅಲಿ ಉಮರ್ 'ಪ್ರವಾದಿ ಪ್ರೇಮ' ಎಂಬ ವಿಷಯದಲ್ಲಿ ಪ್ರವಚನ ನೀಡಿದರು.
ಎಸ್.ಎಸ್.ಎಂ ತಾತ್ಕಾಲಿಕ ಕೇಂದ್ರ ಸಮಿತಿ ಅಧ್ಯಕ್ಷ ಶಿಹಾಬ್ ತಲಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮೂಸ ಫಾಝಿಲ್ ಕುದ್ರೋಳಿ ವಂದಿಸಿದರು.