ಟ್ರಂಪ್ ಗೆ ಬೇಡವಾದ ಭಾರತದ ಐಟಿ ಪ್ರತಿಭೆಗಳಿಗೆ ಈ ದೇಶದಿಂದ ಸ್ವಾಗತ!
ಹೊಸದಿಲ್ಲಿ, ಫೆ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್1ಬಿ ವೀಸಾ ನಿಯಮಾವಳಿಗಳಲ್ಲಿ ಬದಲಾವಣೆ ತಂದು ಭಾರತದ ಐಟಿ ರಂಗಕ್ಕೆ ಹೊಡೆತ ನೀಡಿದ್ದರೆ ಇದೀಗ ಇತರ ದೇಶಗಳು ಈ ಸಂದರ್ಭದ ಸದುಪಯೋಗ ಪಡಿಸಿ ಭಾರತದ ಐಟಿ ಪ್ರತಿಭೆಗಳಿಗೆ ತಮ್ಮ ಬಾಗಿಲುಗಳನ್ನು ತೆರೆದಿವೆ.
ಅಮೆರಿಕದ ನೆರೆಯ ದೇಶವಾದ ಮೆಕ್ಸಿಕೋ ಅಲ್ಲದೆ ಜಪಾನ್, ಆಫ್ರಿಕಾ, ಕೆನಡಾ ಸಹಿತ ಹಲವು ಯುರೋಪಿಯನ್ ಮತ್ತು ಏಷ್ಯಾದ ದೇಶಗಳು ಭಾರತದ ಐಟಿ ರಂಗದ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲು ತುದಿಗಾಲಲ್ಲಿ ನಿಂತಿವೆ.
ಈಗಾಗಲೇ ನ್ಯಾಸ್ಕಾಮ್ ಇದರ ಎರಡನೆ ನಿಯೋಗ ಜಪಾನ್ ಗೆ ತೆರಳಿದ್ದು ಅಲ್ಲಿನ ಐಟಿ ಮತ್ತು ಸಹ ಕ್ಷೇತ್ರಗಳ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದೆ.
ಈ ಹಿಂದೆ ಭಾರತದ 10 ಮಂದಿಯ ನಿಯೋಗ ಜಪಾನ್ ಗೆ ನವೆಂಬರ್ 2015ರಲ್ಲಿ ಭೇಟಿ ನೀಡಿತ್ತು. ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದಲ್ಲಿ ಭಾರತ ಸಾಧಿಸಿದ ಪ್ರಗತಿಯಿಂದ ಜಪಾನ್ ಪ್ರಭಾವಿತವಾಗಿದ್ದು ಅಲ್ಲಿನ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭೆ ಮತ್ತು ಸಾಮರ್ಥ್ಯದ ಕೊರತೆಯಿಂದಾಗಿ ಆ ದೇಶದ ಕೊರತೆಯನ್ನು ನೀಗಲು ಭಾರತದತ್ತ ದೃಷ್ಟಿ ಹರಿಸಿದೆ. ಇದೇ ಮಾತನ್ನು ಟೋಕಿಯೋ ಮೂಲದ ಜಪಾನ್ ಎಕ್ಸ್‌ಟರ್ನಲ್ ಟ್ರೇಡ್ ಆರ್ಗನೈಝೇಶನ್ ಇದರ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿಗೇಕಿ ಮಯೆದ ಅವರು ಹೊಸದಿಲ್ಲಿಯಲ್ಲಿ ಆಯೋಜಿಸಲಾದ ‘ಇನ್ವೆಸ್ಟ್ ಜಪಾನ್’’ ಎಂಬ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭ ಹೇಳಿದ್ದರು. ಈ ಸಂಸ್ಥೆ ಹೊಸದಿಲ್ಲಿಯಲ್ಲಿ ಒಂದು ಕಚೇರಿಯನ್ನೂ ಹೊಂದಿದೆ.
ಭಾರತದ ಐಟಿ ಅಧಿಕಾರಿಗಳನ್ನು ಜಪಾನ್ ತುಂಬು ಹೃದಯದಿಂದ ಸ್ವಾಗತಿಸಿದೆಯಾದರೂ ಈ ಸಂಬಂಧ ಎಷ್ಟರ ಮಟ್ಟಿಗೆ ಎರಡೂ ದೇಶಗಳ ನಡುವೆ ಐಟಿ ಕ್ಷೇತ್ರದಲ್ಲಿನ ಸಹಕಾರಕ್ಕೆ ನಾಂದಿಯಾಗುವುದೆಂದು ಇನ್ನಷ್ಟೇ ತಿಳಿಯಬೇಕಿದೆ. ಮೇಲಾಗಿ ಚೀನಾ ಮತ್ತು ಜಪಾನ್ ನಂತಹ ದೇಶದಲ್ಲಿ ಕೆಲಸ ಮಾಡಲು ಭಾಷೆಯೂ ಅಡ್ಡಗೋಡೆಯಾಗುವ ಸಂಭವವಿದೆ ಎಂದು ದಿ ಹೆಡ್ ಹಂಟರ್ಸ್ ಇಂಡಿಯಾ ಇದರ ಸ್ಥಾಪಕ ಆಡಳಿತ ನಿರ್ದೇಶಕ ಕ್ರಿಸ್ ಲಕ್ಷ್ಮೀಕಾಂತೆ ಹೇಳಿದ್ದಾರೆ.