ಸಿನೆಮಾ ನಟಿ ಅಪಹರಣ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಕೇರಳ ಡಿಜಿಪಿಗೆ ತನಿಖಾಪ್ರಗತಿ ನೀಡಲು ಸೂಚನೆ
ಹೊಸದಿಲ್ಲಿ, ಫೆ. 21: ಪ್ರಮುಖ ಚಲನಚಿತ್ರ ನಟಿಯನ್ನು ಅಪಹರಿಸಿದ ಪ್ರಕರಣದಲ್ಲಿ ಕಠಿಣ ಕ್ರಮಕೈಗೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ. ಡಿಜಿಪಿಯನ್ನು ಕರೆಯಿಸಿಕೊಂಡು ತನಿಖೆಯ ಪ್ರಗತಿಯನ್ನು ಅವರಿಂದ ನೇರವಾಗಿ ಕೇಳಿ ತಿಳಿದು ಕೊಳ್ಳಲು ಅದು ನಿರ್ಧರಿಸಿದೆ. ಮುಂದಿನ ಸೋಮವಾರ ಡಿಜಿಪಿಲೋಕನಾಥ ಬೆಹ್ರಾ ತನ್ನ ಮುಂದೆ ನೇರವಾಗಿ ಹಾಜರಾಗಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ. ಅಪಹರಣಕ್ಕೊಳಗಾದ ನಟಿಯಿಂದ ಮತ್ತು ನಿರ್ಮಾಪಕ, ನಟ ಲಾಲ್‌ರಿಂದ ಆಯೋಗ ವಿವರಗಳನ್ನು ಕೇಳಿದೆ.
ಅಗತ್ಯಬಿದ್ದರೆ ಕೇರಳಕ್ಕೆ ಬಂದು ಸಾಕ್ಷ್ಯ ಸಂಗ್ರಹಿಸುವುದಾಗಿಯೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ತಿಳಿಸಿದ್ದಾರೆ.
ಇದೇ ವೇಳೆ, ನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನಟಿಗೆ ಫೋನ್ ಮಾಡಿ ಅವರು ಈ ಕುರಿತು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 9:30ಕ್ಕೆ ಅಂಗಮಾಲಿ ಅತ್ತಾಣಿ ಸಮೀಪ ನಟಿಯ ಕಾರನ್ನು ತಡೆದು ದುಷ್ಕರ್ಮಿಗಳ ತಂಡ ಅದರೊಳಗೆ ನುಗ್ಗಿತ್ತು. ಅವಮಾನಕಾರಿ ರೀತಿಯಲ್ಲಿ ದೃಶ್ಯಗಳನ್ನು ಚಿತ್ರಿಸಿಕೊಳ್ಳಲು ತಂಡ ಯತ್ನಿಸಿದಾಗ ನಟಿ ವಿರೋಧಿಸಿದ್ದರು. ಹತ್ತೂವರೆಗಂಟೆಗೆ ಕಾಕ್ಕನಾಟ್ ಎಂಬಲ್ಲಿ ನಟಿಯನ್ನು ಬಿಟ್ಟು ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದರು.
ಆರೋಪಿಗಳ ವಿರುದ್ಧ ಕಿರುಕುಳ ಯತ್ನ, ಅಪಹರಣ, ಸಂಚು , ಬೆದರಿಕೆಯೊಡ್ಡಿದ್ದು, ಬಲಪ್ರಯೋಗ ಮುಂತಾದ ಆರೋಪಗಳನ್ನು ಹೊರಿಸಿ ಪೊಲೀಸರು ಕೇಸುದಾಖಲಿಸಿದ್ದಾರೆಂದು ವರದಿ ತಿಳಿಸಿದೆ.