×
Ad

ಮೆಣಸಿನ ಹುಡಿ ಎರಚಿ ಕಾಮುಕನಿಂದ ಪಾರಾದ ಯುವತಿ

Update: 2017-02-21 15:40 IST

ಮೂಡುಬಿದಿರೆ, ಫೆ.21: ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಮಹಿಳೆ ಕಾಮುಕನಿಗೆ ಮೆಣಸಿನ ಹುಡಿ ಎರಚಿ ಪಾರಾದ ಘಟನೆ ಕಡಂದಲೆ ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ನಂತರ ಸ್ಥಳೀಯರೇ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ. 

ಯುವಕನ ಮೇಲೆ ಐಪಿಸಿ 354ರನ್ವಯ ಅತ್ಯಾಚಾರಕ್ಕೆ ಯತ್ನ ಪ್ರಕರಣ ದಾಖಲಿಸಿರುವ ಮೂಡುಬಿದಿರೆ ಪೊಲೀಸರು ಮಂಗಳವಾರ ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಮೂಡುಬಿದಿರೆ ಪೇಟೆಯ ನಿಶ್ಮಿತಾ ಮಿಲ್ ಸಮೀಪದ ನಿವಾಸಿ ಸುಧೀರ್ (21) ಎಂದು ಗುರುತಿಸಲಾಗಿದೆ. ಈತ ಮೂಡುಬಿದಿರೆಯ ಮೊಬೈಲ್ ಔಟ್‌ಲೆಟ್ ಒಂದರ ಉದ್ಯೋಗಿ.

ಈತ ಗುಡ್ಡೆಯಂಗಡಿ ಎಂಬಲ್ಲಿ ಮದ್ಯಪಾನ ಮಾಡಿ ತನ್ನ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕೊಡ್ಯಡ್ಕದಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರ ಜೊತೆ ಅನುಚಿತವಾಗಿ ವರ್ತಿಸಿದ್ದು, ನಂತರ ಮಹಿಳೆಯ ಮೇಲೆ ಮಾನಭಂಗಕ್ಕೂ ಯತ್ನಿಸಿರುವುದಾಗಿ ಮಹಿಳೆ ಠಾಣೆಗೆ ದೂರು ನೀಡಿದ ಆಧಾರದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ದಲಿತ ಸಮುದಾಯದವನಾಗಿರುವ ಸುಧೀರ್, ಸಾಧು ಸ್ವಭಾವದವನಾಗಿದ್ದು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ದೂರುದಾರ ಮಹಿಳೆಯ ಹತ್ತಿರದಿಂದ ಹಾದು ಹೋಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸುಧೀರ್ ವಾಪಸ್ ಬರುವವರೆಗೆ ಕಾದು ನಿಂತು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಮಹಿಳೆಯ ಮಾನಭಂಗಕ್ಕೆ ಯತ್ನ ಎಂಬ ದೂರಿನಾಧಾರದಲ್ಲಿ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

ಮೆಣಸಿನ ಹುಡಿ ಎರಚಿ ಪಾರು: ಗುಡ್ಡೆಯಂಗಡಿಯಲ್ಲಿ ನಿವಾಸಿ ಜಯಶ್ರೀ (30) ಎಂಬಾಕೆ ತನ್ನ ಮನೆಯಲ್ಲಿ ಸೋಮವಾರ ಮಧ್ಯಾಹ್ನ ಒಂಟಿಯಾಗಿದ್ದ ಸಂದರ್ಭ ಆರೋಪಿ ಸುಧೀರ್ ಅಕ್ರಮವಾಗಿ ಮನೆ ಪ್ರವೇಶಿಸಿದ್ದಾನೆ. ಈತ ಈ ಹಿಂದೆ ಎರಡು ಬಾರಿ ಹೀಗೆ ಮನೆಗೆ ಬಂದಿದ್ದು, ಒಂದು ಬಾರಿ ಶೇಂದಿ ಅಂಗಡಿ ಎಲ್ಲಿದೆ ಎಂಬುದಾಗಿ ವಿಚಾರಿಸಿದ್ದರೆ, ಇನ್ನೊಂದು ಬಾರಿ ನೀರು ಕೇಳುವ ನೆಪದಲ್ಲಿ ಬಂದಿದ್ದ. ಆದರೆ ಸೋಮವಾರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಸುಧೀರ್, ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಆತನಿಂದ ಪಾರಾಗಲು ಮಹಿಳೆ ಮೆಣಸಿನ ಹುಡಿಯ ಸಹಾಯ ಪಡೆದಿದ್ದಾರೆ. ಆತನ ಮುಖಕ್ಕೆ ಮೆಣಸಿನ ಹುಡಿ ಎರಚಿದ ಕೂಡಲೇ ಆತ ಅಲ್ಲಿಂದ ಓಡಲೆತ್ನಿಸಿದ್ದು, ಈ ಸಂದರ್ಭ ಮಹಿಳೆ ಬೊಬ್ಬೆ ಹಾಕಿದ್ದಾರೆ. ಆ ಸಂದರ್ಭ ಸುಧೀರ್ ತನ್ನ ಬೈಕ್ ಅನ್ನು ಚಲಾಯಿಸಲೆತ್ನಿಸಿದ್ದು ಮಹಿಳೆ ಆತನ ಬ್ಯಾಗ್ ಅನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೈಕನ್ನು ಮಹಿಳೆಯ ಕಾಲಿನ ಮೇಲೆಯೇ ಚಲಾಯಿಸಿ ಪರಾರಿಯಾದ ಸುಧೀರ್ ತನ್ನ ಶೂ ಅನ್ನು ಅಲ್ಲೇ ಗಡಿಬಿಡಿಯಲ್ಲಿ ಬಿಟ್ಟುಬಂದಿದ್ದ. ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಆತ ಮೂಡುಬಿದಿರೆ ರಸ್ತೆಯಲ್ಲಿ ತೆರಳಿದ್ದನ್ನು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ಕಾಲಿನಲ್ಲಿ ಶೂ ಇಲ್ಲದೇ ಇರುವುದನ್ನು ಗಮನಿಸಿದ ಸ್ಥಳೀಯರು ಆರೋಪಿ ಸುಧೀರ್ ನನ್ನು ಪತ್ತೆ ಹಚ್ಚಿ  ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News