ಪ್ಲಾಸ್ಟಿಕ್ ಹಾಳೆಯನ್ನು ಗ್ಲಾಸ್ ಅಥವಾ ಪ್ಲಾಸ್ಟಿಕ್ ಬೌಲ್‌ನ ಅಂಚಿನ ಮೇಲಿಟ್ಟು ಅದುಮಿದರೇಕೆ ಅಂಟಿಕೊಳ್ಳುತ್ತದೆ..?

Update: 2017-02-21 11:40 GMT

ಆಹಾರವನ್ನು ಮುಚ್ಚಲು ಬಳಸುವ ಪ್ಲಾಸ್ಟಿಕ್ ಹಾಳೆಯ ತುಂಡು ಅಥವಾ ಫುಡ್ ರ್ಯಾಪ್‌ನ್ನು ರೋಲ್‌ನಿಂದ ಎಳೆದುಕೊಂಡಾಗ ಅದು ಹೆಚ್ಚಿನಂಶ ವಿದ್ಯುತ್ ಚಾರ್ಜ್‌ನ ತುಣುಕುಗಳನ್ನು ಹೊಂದಿರುತ್ತದೆ. ತಯಾರಿಕೆ ವೇಳೆ ಈ ಚಾರ್ಜ್‌ಗಳು ಅದರಲ್ಲಿ ಉಳಿದುಕೊಂಡಿರುತ್ತವೆ.

ಫುಡ್ ರ್ಯಾಪ್‌ನ್ನು ಗ್ಲಾಸ್ ಅಥವಾ ಪ್ಲಾಸ್ಟಿಕ್ ಬೌಲ್‌ನ ರಿಮ್‌ಅಥವಾ ಅಂಚಿನ ಎದುರು ಹಿಡಿದಾಗ ಸಂಪರ್ಕ ವಿದ್ಯುದ್ದೀಕರಣ ನಡೆದು ಚಾರ್ಜ್ ಎರಡು ಮೇಲ್ಮೈಗಳ ನಡುವೆ ವರ್ಗಾವಣೆಗೊಳ್ಳುತ್ತದೆ.

 ಉದಾಹರಣೆಗೆ ಫುಡ್ ರ್ಯಾಪ್ ಬೌಲ್‌ನ ಅಂಚಿನ ಮೇಲಿರುವ ಕೆಲವು ಇಲೆಕ್ಟ್ರಾನ್‌ಗಳನ್ನು ತನ್ನೊಳಗೆ ಎಳೆದುಕೊಳ್ಳಬಹುದು ಮತ್ತು ಇದರಿಂದಾಗಿ ಅಂಚಿನ ಭಾಗವು ಧನಾತ್ಮಕವಾಗಿ ಚಾರ್ಜ್ ಆಗುತ್ತದೆ. ಋಣಾತ್ಮಕ ಚಾರ್ಜ್ ಹೊಂದಿರುವ ರ್ಯಾಪ್ ಮತ್ತು ಧನಾತ್ಮಕ ಚಾರ್ಜ್ ಹೊಂದಿರುವ ಬೌಲ್‌ನ ಅಂಚು ಪರಸ್ಪರ ಆಕರ್ಷಿಸುತ್ತವೆ. ಇದರ ಜೊತೆಗೆ ‘ವ್ಯಾನ್ ಡೆರ್ ವಾಲ್ಸ್ ಫೋರ್ಸ್’ ಎಂದು ಕರೆಯಲಾಗುವ ಕಣಗಳ ನಡುವಿನ ಪರಸ್ಪರ ಆಕರ್ಷಕ ಶಕ್ತಿಯೂ ಬೌಲ್‌ನ ಅಂಚು ಮತ್ತು ರ್ಯಾಪ್ ನಡುವೆ ಸಕ್ರಿಯವಾಗಿರುತ್ತದೆ. ಈ ಶಕ್ತಿಗೆ ವಿದ್ಯುತ್ ಅಂತರ್‌ಕ್ರಿಯೆ ಕಾರಣವಾಗಿದೆ. ಈ ಕ್ರಿಯೆಯಲ್ಲಿ ಒಂದು ಮೇಲ್ಮೈ ಮೇಲಿನ ಕಣದಲ್ಲಿಯ ಧನಾತ್ಮಕ ಮತ್ತು ಋಣಾತ್ಮಕ ಚಾರ್ಜ್‌ಗಳು ಸ್ವಲ್ಪವೇ ಬೇರ್ಪಡುತ್ತವೆ ಮತ್ತು ಇನ್ನೊಂದು ಮೇಲ್ಮೈ ಮೇಲಿನ ಅತ್ಯಂತ ಸಮೀಪದ ಕಣದಲ್ಲಿಯೂ ಇಂತಹುದೇ ಬೇರ್ಪಡುವಿಕೆಗೆ ಕಾರಣವಾಗುತ್ತದೆ.

 ಇಂತಹ ಪ್ರತಿಯೊಂದೂ ಚಾರ್ಜ್‌ನ ಬೇರ್ಪಡೆಯನ್ನು ವಿದ್ಯುತ್ ದ್ವಿಧ್ರುವ ಅಥವಾ ಡೈಪೋಲ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಎರಡು ಮೇಲ್ಮೈಗಳ ಮೇಲಿರುವ ಡೈಪೋಲ್‌ಗಳು ಪರಸ್ಪರ ಆಕರ್ಷಿಸುತ್ತವೆ. ದುರ್ಬಲವಾಗಿದ್ದರೂ ಈ ಆಕರ್ಷಣೆ ರ್ಯಾಪ್‌ನ್ನು ಬೌಲ್‌ನ ಅಂಚು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಟಿವಿ ಜಾಹೀರಾತುಗಳಲ್ಲಿ ತೋರಿಸುವಂತೆ ಈ ಪ್ಲಾಸ್ಟಿಕ್ ಬೌಲ್‌ನ್‌ನು ತಲೆಕೆಳಗೆ ಮಾಡಿದರೂ ಅದರೊಳಗಿನ ಆಹಾರ ಹೊರಚೆಲ್ಲದಿರುವ ಜಾದೂವನ್ನೂ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News