ಸಮಾಜ ತಿದ್ದಲು ಯುವಕರು ಪಣತೊಡಲಿ: ಐಜಿಪಿ ಹರಿಶೇಖರನ್

Update: 2017-02-21 11:57 GMT

ಮಂಗಳೂರು, ಫೆ.21: ಸುತ್ತಮುತ್ತಲಿನ ಸಮಾಜವನ್ನು ಅರಿತುಕೊಂಡು ಓರೆಕೋರೆಗಳನ್ನು ತಿದ್ದಲು ಯುವ ಜನತೆ ಮುಂದಾಗಬೇಕು ಎಂದು ಐಜಿಪಿ ಪಿ. ಹರಿಶೇಖರನ್ ಕರೆ ನೀಡಿದರು.

ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮಾನವ ಹಕ್ಕುಗಳ ಕುರಿತು ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಕುರಿತು ಶಿಕ್ಷಕರು ಪುಸ್ತಕವನ್ನು ಓದಿ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ಅರಿವು ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳು ಪುಸ್ತಕ ಓದಿ ಕುಳಿತರೆ ಸಾಲದು. ಸಮಾಜದಲ್ಲಿನ ಪ್ರಚಲಿತ ವಿದ್ಯಮಾನಗಳ ಕುರಿತು ಅವಲೋಕನ ಮಾಡಬೇಕು ಎಂದು ಐಜಿಪಿ ಹರಿಶೇಖರನ್ ಹೇಳಿದರು.

ಮೂಲಭೂತ ಹಕ್ಕುಗಳು ಹುಟ್ಟಿನಿಂದಲೇ ಬರುತ್ತವೆ. ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ಪ್ರಪಂಚದೆಲ್ಲೆಡೆ ವಾಸಿಸಬಹುದು, ಪ್ರಯಾಣಿಸಬಹುದಾಗಿದೆ. ಯುವ ಜನತೆ ಇಡೀ ಜಗತ್ತನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ. ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಮಾಜದಲ್ಲಿ ಎಸ್ಸಿ, ಎಸ್ಟಿ, ಭೂ ರಹಿತರು, ಕೂಲಿ ಕಾರ್ಮಿಕರು ಹೇಗೆ ಸಮಾನವಾಗಿ ಅವಕಾಶ ಪಡೆಯಲು ಸಾಧ್ಯ?. ಶಿಕ್ಷಣ ಪಡೆದವರೇ ಸುಮ್ಮನೆ ಕುಳಿತರೆ ಬಡ ಜನರ ಗತಿಯೇನು? ಎಂದು ಪ್ರಶ್ನಿಸಿದ ಅವರು, ಯುವಕರು ಸಮಾಜದ ಸಮಸ್ಯೆಯನ್ನು ಗುರುತಿಸಿ ಅವುಗಳ ನಿವಾರಣೆಗೆ ಪ್ರಯತ್ನಿಸಬೇಕು. ಸಾಮಾಜಿಕ ನ್ಯಾಯದಿಂದ ಮಾನವ ಹಕ್ಕುಗಳನ್ನು ಎಲ್ಲರೂ ಪಡೆಯಲು ಸಾಧ್ಯವಾಗುತ್ತದೆ ಎಂದು ಹರಿಶೇಖರನ್ ಹೇಳಿದರು.

ಮೊದಲು ರಸ್ತೆಗಳ ಗುಣಮಟ್ಟ ಕಳಪೆಯಾಗುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತವೆ ಎನ್ನುತ್ತಿದ್ದರು. ಈಗ ರಸ್ತೆಗಳು ಉತ್ಕೃಷ್ಠ ಮಟ್ಟದಲ್ಲಿದ್ದು, ವೇಗದ ಪ್ರಯಾಣದಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ ಎನ್ನುವ ದೂರುಗಳು ಕೇಳಿಬರುತ್ತಿವೆ. ರಸ್ತೆ ಅಪಘಾತದಲ್ಲಿ ದೇಶದಲ್ಲಿ ರಾಜ್ಯ ನಾಲ್ಕನೆ ಸ್ಥಾನದಲ್ಲಿದೆ. ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಪ್ರತಿಯೊಬ್ಬರು ಸ್ವಯಂ ಜಾಗೃತರಾಗಬೇಕಿದೆ. ಮಾದಕ ವ್ಯಸನಿಗಳು ನಗರದಲ್ಲಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಮಂಗಳೂರು 2ನೆ ಸ್ಥಾನದಲ್ಲಿದೆ. ಶೇ.5ರಷ್ಟು ಯುವಕರು ಮಾದಕ ವ್ಯಸನಿಗಳಾಗಿದ್ದಾರೆ. ಪ್ರತಿಯೊಬ್ಬರು ಸಮಾಜದ ಒಳಿತಿನ ಕುರಿತು ಚಿಂತಿಸಲಿ ಎಂದು ಹರಿಶೇಖರನ್ ಹೇಳಿದರು.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನ್‌ಭಾಗ್ ಮಾತನಾಡಿ, ಮಾನವ ಹಕ್ಕುಗಳೆಂದರೆ ಬದುಕುವ ಹಕ್ಕುಗಳಾಗಿವೆ. ಬಂದ್ ಸಂದರ್ಭ ಕ್ಲಾಸ್‌ನಿಂದ ಹೊರ ಬಂದು ಬಸ್‌ಗಳ ಗಾಜನ್ನು ಒಡೆಯುವುದು ಹೋರಾಟವಲ್ಲ. ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಆಗ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಟ್ರಸ್ಟಿ ವಿಜಯಲಕ್ಷ್ಮೀ, ಉಪನ್ಯಾಸಕಿ ರೇಷ್ಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News