ಮಂಗಳೂರು: ಫೆ.23ರಂದು ಪ್ರಾಂಶುಪಾಲರ ಒಕ್ಕೂಟದಲ್ಲಿ 'ಮಿಶನ್ ಏಂಜಲ್ ಡಸ್ಟ್' ಅಭಿಯಾನ
ಮಂಗಳೂರು, ಫೆ.21: ಮಾದಕ ವ್ಯಸನದ ಸಮಸ್ಯೆಯ ಪರಿಹಾರಕ್ಕಾಗಿ ದ.ಕ., ಉಡುಪಿ, ಕೊಡಗು ಹಾಗೂ ಕಾಸರಗೋಡಿನ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಒಗ್ಗೂಡಿ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ 'ಮಿಶನ್ ಏಂಜಲ್ ಡಸ್ಟ್' ಎಂಬ ಅಭಿಯಾನವನ್ನು ನಡೆಸಲಿದ್ದಾರೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಜಿ. ಶ್ರೀಕುಮಾರ್ ಮೆನನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೋಟರಿ ಕ್ಲಬ್, ಮಂಗಳೂರು, ಹಿಲ್‌ಸೈಡ್ ನಂ.3181, ಮಲಬಾರ್ ಗೋಲ್ಡ್, ಜೆಟ್ ಏರ್‌ವೇಸ್ ಹಾಗೂ ಕಾರ್ಪೋರೇಷನ್ ಬ್ಯಾಂಕ್‌ಗಳು ಜಂಟಿಯಾಗಿ ಈ ಕಾರ್ಯಕ್ರಮ ನಡೆಸಲಿವೆ.
ಫೆ.23ರಂದು ಯೆನೆಪೊಯ ಮೆಡಿಕಲ್ ಕಾಲೇಜಿನ ಲೆಕ್ಚರ್ ಹಾಲ್‌ನಲ್ಲಿ ಬೆಳಗ್ಗೆ 9:30ಕ್ಕೆ ಪ್ರಾರಂಭಗೊಳ್ಳುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಭೋರಸೆ ಉದ್ಘಾಟಿಸಲಿದ್ದು, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಎ.ಎಂ. ನರಹರಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
2016ನೆ ಸಾಲಿನಲ್ಲಿ ಮಾದಕ ವ್ಯಸನ ಕುರಿತಂತೆ ಮಂಗಳೂರಿನಲ್ಲಿ 239 ಹಾಗೂ ಬೆಂಗಳೂರಿನಲ್ಲಿ 128 ಪ್ರಕರಣಗಳು ದಾಖಲಾಗಿದ್ದವು. ಯುವಪೀಳಿಗೆಯನ್ನು ದಾರಿ ತಪ್ಪಿಸುವ ಸಲುವಾಗಿ ಈ ದ್ರವ್ಯಗಳಿಗೆ ಪ್ರಲೋಭನಾ ಹೆಸರುಗಳಾದ ಕ್ಯಾಂಡಿ,ಫ್ಲೇಕ್, ಕೋಕ್, ಎಕ್ಟೆಸಿ, ಪಾಪರ್ಸ್, ಕಿಟ್‌ಕ್ಯಾಟ್, ಆಫ್ರಿಕನ್ ಸಲಾಡ್, ಮೈಕ್ರೋಡಾಟ್, ಮೇರಿ ಜೇನ್ ಹಾಗೂ ಜೋಂಬಿ ವೀಡ್ ಅನ್ನು ಬದಲಿಯಾಗಿ ನೀಡುತ್ತಾರೆ. ಇವುಗಳು ಕೇಂದ್ರ ನರಮಂಡಲದ ನರಕೋಶ ಸಂಗಮಗಳಿಗೆ ಹಾನಿಮಾಡಿ, ಮೆದುಳು ಸ್ವಾಯತ್ತತೆಯನ್ನು ಕಳೆದುಕೊಳ್ಳುವಂತೆ ಮಾಡಿ, ಬೆಳಕು, ವರ್ಣ ಹಾಗೂ ಧ್ವನಿಯನ್ನು ಹೆಚ್ಚಿಸಿ ವಾಸ್ತವತೆಯಿಂದ ಬೇರ್ಪಡಿಸುತ್ತದೆ.
ಶಾಲಾ- ಕಾಲೇಜುಗಳ ಪಠ್ಯಕ್ರಮದಲ್ಲಿ ಮಾದಕದ್ರವ್ಯ ಸೇವನೆಯಿಂದಾಗುವ ಪ್ರಮಾದಗಳನ್ನು ಅಳವಡಿಸಲಾಗಿಲ್ಲ. ಹಾಗಾಗಿ ಮಾದಕ ದ್ರವ್ಯಗಳ ವಿರುದ್ಧ ಹೋರಾಡುವ ಪ್ರಯತ್ನವನ್ನು ಶಾಲಾ ದಿನಗಳಿಂದಲೇ ಆರಂಭಿಸಬೇಕು. ಈ ನಿಟ್ಟಿನಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ 'ಯೆನೆಪೊಯ ನಾರ್ಕೋಟಿಕ್ಸ್ ಎಜುಕೇಶನಲ್ಡೇ ಫೌಂಡೇಶನ್ ಆಫ್ ಇಂಡಿಯಾ' ವನ್ನು ಸ್ಥಾಪಿಸಿದ್ದಾರೆ. ಏಂಜೆಲ್ ಡಸ್ಟ್ ನಿಯೋಗದ ಅಧೀನದಲ್ಲಿ ಪ್ರಾಂಶುಪಾಲರ ಒಕ್ಕೂಟವು ಮಾದಕ ದ್ರವ್ಯಗಳ ಬಳಕೆ ತಡೆಗಟ್ಟುವ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಡಾ. ಜಿ. ಶ್ರೀಕುಮಾರ್ ಮೆನನ್‌ನುಡಿದರು.
ಸುದ್ದಿಗೋಷ್ಠಿಯಲ್ಲಿ ಪಲ್ಮನರಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇರ್ಫಾನ್, ಯೆನೆಪೊಯ ಫಿಸಿಯೋಥೆರಪಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶೆಮ್‌ಜಾಝ್ ಉಪಸ್ಥಿತರಿದ್ದರು.