ದೇಶಕ್ಕೆ ಸಹಕಾರಿ ಒಂದೇ ಪರ್ಯಾಯ: ಕಿಶನ್ ಹೆಗ್ಡೆ ಕೊಳ್ಕೆಬೈಲ್
ಉಡುಪಿ, ಫೆ.21: ಸಹಕಾರಿ ಸಂಘಗಳು ಇಂದು ಕೆಟ್ಟ ಕಾಲದಲ್ಲಿವೆ. ಅದನ್ನು ಎದುರಿಸುವ ದೊಡ್ಡ ಸವಾಲು ಸಹಕಾರಿ ಸಂಘಗಳ ಮುಂದೆ ಇವೆ. ಈ ಮೂಲಕ ಸಂಘವನ್ನು ಉಳಿಸಬೇಕಾಗಿದೆ. ಈ ದೇಶಕ್ಕೆ ಇರುವುದು ಸಹಕಾರಿ ಸಂಘ ಒಂದೇ ಪರ್ಯಾಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು/ನಿರ್ದೇಶಕರು/ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಅಜ್ಜರಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಆಡಳಿತ ನಿರ್ವಹಣಾ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಶಿಬಿರವನ್ನು ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಉದ್ಘಾಟಿಸಿ, ರಾಜ್ಯದಲ್ಲಿ ಒಟ್ಟು 40ಸಾವಿರ ಸಹಕಾರಿ ಸಂಘಗಳಿದ್ದು ಇವುಗಳಲ್ಲಿ 27ಸಾವಿರ ಮಾತ್ರ ಲಾಭದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 800 ಸಹಕಾರಿ ಸಂಘಗಳು ಲಾಭದಲ್ಲಿ ಮುಂದುವರೆಯುತ್ತಿವೆ. ಇಂದು ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವಷ್ಟು ಬೆಳೆದಿವೆ ಎಂದರು.
ಮುಖ್ಯ ಅತಿಥಿಯಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಉಡುಪಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇ ಶಕಿ ಸವಿತಾ, ಕುಂದಾಪುರ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚಂದ್ರ ಪ್ರತಿಮಾ ಎಂ.ಜೆ. ಮಾತನಾಡಿದರು.
ಮಂಡಳಿ ನಿರ್ದೇಶಕರಾದ ಬಿ.ಮದುಸೂದನ ನಾಯಕ್, ಮಂಜುನಾಥ ಎಸ್.ಕೆ., ಕೋಶಾಧಿಕಾರಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಬಿ.ಜಗದೀಶ್ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು.
ದಾಳಿ ನಿಜ, ಹಣ ಸಿಕ್ಕಿಲ್ಲ:
ಸಹಕಾರಿ ಸಂಘಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ನಿಜ. ಆದರೆ ಎಲ್ಲೂ ಕೂಡ ಅಕ್ರಮದ ಹಣ ದೊರೆ ತಿಲ್ಲ. ಆದುದರಿಂದ ಅಪಪ್ರಚಾರಕ್ಕೆ ಯಾರು ಕೂಡ ಕಿವಿಗೊಡಬಾರದು ಎಂದು ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸ್ಪಷ್ಟ ಪಡಿಸಿದ್ದಾರೆ.