×
Ad

ವಿಶೇಷ ಶಿಕ್ಷಕರಿಗೆ ಹೆಚ್ಚು ತಾಳ್ಮೆ ಅತೀ ಅಗತ್ಯ: ಮಲ್ಲನಗೌಡ ಪಾಟೀಲ್

Update: 2017-02-21 19:21 IST

ಮಂಗಳೂರು, ಫೆ. 21: ಶಾಲೆಗಳು, ಮಹಾವಿದ್ಯಾಲಯಗಳು ಬಹಳಷ್ಟು ಇವೆ. ಆದರೆ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಗಳನ್ನು ನಡೆಸುವುದು ನಿಜವಾಗಿಯೂ ಕಷ್ಟದ ಕೆಲಸ. ಅಲ್ಲಿರುವ ವಿಶೇಷ ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣವನ್ನು, ತರಬೇತಿಯನ್ನು ನೀಡುವ ಅಗತ್ಯವಿದೆ. ಅವರಿಗೆ ತರಬೇತಿ ನೀಡುವ ವಿಶೇಷ ಶಿಕ್ಷಕರಿಗೆ ಹೆಚ್ಚಿನ ತಾಳ್ಮೆ ಅತೀ ಅಗತ್ಯವಾಗಿದೆ ಎಂದು ನ್ಯಾಯಾಧೀಶ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಮಲ್ಲನ ಗೌಡ ಪಾಟೀಲ್ ಹೇಳಿದ್ದಾರೆ.

ರಾಜ್ಯ ಸರಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ನಗರದ ಸರಕಾರಿ ಮಹಿಳಾ ತಾಂತ್ರಿಕ ಮಹಾವಿದ್ಯಾಲಯವು ಸಾನಿಧ್ಯದಲ್ಲಿ ನಡೆಸಿದ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರಿಗಾಗಿ 6 ತಿಂಗಳ ಅವಧಿಯ ತರಬೇತಿಯ ಡಿಪ್ಲೊಮಾ ಇದರ 3ನೆ ತಂಡದ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.

ವಿಶೇಷ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ನಾನು ವೈಯುಕ್ತಿಕವಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಅವರು ಹೇಳಿದರು.

  ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಎನ್.ಕುಂಬಾರ್ ಮುಖ್ಯ ಅತಿಥಿಯಾಗಿದ್ದರು. ಗಣೇಶಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ದೆವದತ್ತ ರಾವ್, ಖಜಾಂಜಿ ಜಗದೀಶ್ ಶೆಟ್ಟಿ, ನಿರ್ದೇಶಕ ಮುಹಮ್ಮದ್ ಬಶೀರ್ ಉಪಸ್ಥಿತರಿದ್ದರು.

ಡಿಪ್ಲೊಮಾ ತರಬೇತಿಯ ಕಾರ್ಯಕ್ರಮದಲ್ಲಿ 17 ಮಂದಿ ಡಿಸ್ಟಿಂಕ್ಷನ್‌ನಲ್ಲಿ, 6 ಮಂದಿ ಪ್ರಥಮ ಶ್ರೇಣಿಯಲ್ಲಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ರಾಜ್ಯ ತಂಡದ ಸದಸ್ಯ ಮಾ.ಪ್ರಜ್ವಲ್ ಲೋಬೊ ಮತ್ತು ಮುಹಮ್ಮದ್ ತಲ್ಹತ್ ಹಾಗೂ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ವಿನಾಯಕ ವಿ. ಕೆ. ಮತ್ತು ಪ್ರೀತಿ ಕೆೆ. ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಹ್ಯಾರಿ ಡಿಸೋಜರವರ ನೇತೃತ್ವದಲ್ಲಿ ಸಾನಿಧ್ಯದ ವಿಶೇಷ ಮಕ್ಕಳು ಬ್ಯಾಂಡ್ ನುಡಿಸಿದರು. ಸಾನಿಧ್ಯದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ವಂದಿಸಿದರು. ಹರ್ಷಿತಾ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News