×
Ad

ಕಲೆಗಳ ಮೂಲ ಸ್ವರೂಪ ಉಳಿಯಬೇಕು: ಈಶ್ವರಯ್ಯ

Update: 2017-02-21 19:38 IST

ಉಡುಪಿ, ಫೆ. 21: ಕಾಲಕ್ಕೆ ತಕ್ಕಂತೆ ಕೆಲ ಬದಲಾವಣೆ ಅಗತ್ಯವಾದರೂ ಯಕ್ಷಗಾನವೂ ಸೇರಿದಂತೆ ನಮ್ಮೆಲ್ಲಾ ಕಲೆಗಳು ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕು ಎಂದು ಖ್ಯಾತ ಕಲಾ ವಿಮರ್ಶಕ ಎ. ಈಶ್ವರಯ್ಯ ಹೇಳಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ವಿವಿಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ನಾಲ್ಕು ದಿನಗಳ ತೆಂಕು-ಬಡಗು ತಿಟ್ಟಿನ ಯಕ್ಷಗಾನ ಹಾಗೂ ಮೂಡಲಪಾಯದ ಭಾಗವತಿಕೆ, ಹೆಜ್ಜೆಗಾರಿಕೆಗಳ ದಾಖಲೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಶಾಸ್ತ್ರೀಯ ಕನ್ನಡ ಪದಗಳನ್ನು ಬಳಕೆ ಮಾಡಿ ತನ್ನ ಪ್ರಭುದ್ಧತೆಯನ್ನು ಉಳಿಸಿಕೊಂಡುಬಂದಿದೆ. ಇದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಗತ್ಯವಿದೆ ಎಂದವರು ಹೇಳಿದರು.

ನಮ್ಮಲ್ಲಿರುವ ಎಲ್ಲಾ ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಕಲೆಗಳ ಕುರಿತಂತೆ ಕಾಲ ಕಾಲಕ್ಕೆ ದಾಖಲೀಕರಣದ ಅಗತ್ಯವಿದೆ.ಈ ನಿಟ್ಟಿನಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ದಾಖಲೀಕರಣಕ್ಕೆ ಮುಂದಾಗಿರುವುದು ಸ್ತುತ್ಯರ್ಹ ಎಂದು ಈಶ್ವರಯ್ಯ ನುಡಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಶಿ ಆಶಯ ನುಡಿಗಳನ್ನಾಡಿದರು.ಅಕಾಡೆಮಿ ಸದಸ್ಯ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಹಿರಿಯ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಹಿರಿಯ ಭಾಗವತ ಜಯಂತ ಕುಮಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್ ಅತಿಥಿಗಳಾಗಿ ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News