ಪ್ರಯೋಗಗಳು ಕಲಾ ಚೌಕಟ್ಟಿನೊಳಗಿರಲಿ : ಸದಾಶಿವ ಶೆಟ್ಟಿಗಾರ್
ಮೂಡುಬಿದಿರೆ, ಫೆ.21: ಯಕ್ಷಗಾನ ಅಪೂರ್ವ ಕಲಾಪ್ರಕಾರವಾಗಿದ್ದು, ವೇಷಭೂಷಣ, ಬಣ್ಣಗಾರಿಕೆ ಮತ್ತು ಪಾತ್ರನಿರ್ಮಾಣ ಕೌಶಲಗಳ ಅನನ್ಯ ಅನುಭವ. ಆಧುನಿಕತೆಯ ಧಾವಂತ ಮತ್ತು ಬದುಕಿನ ಒತ್ತಡ ಸಮರ್ಪಿತ ಕಲಾಸೇವೆಗೆ ಅಡ್ಡಿಯಾಗಿದೆ. ಹೊಸಹೊಸ ಪ್ರಯೋಗಗಳನ್ನು ಅಳವಡಿಸುವ ಧಾವಂತದಲ್ಲಿ ಪರಂಪರೆಗೆ ಧಕ್ಕೆಯಾಗುತ್ತಿದೆ. ಇದು ಕಲೆಯ ದೃಷ್ಟಿಯಿಂದ ಆತಂಕಕಾರಿ. ಪ್ರಯೋಗಗಳು ಯಾವಾಗಲೂ ಕಲಾ ಚೌಕಟ್ಟು ಮತ್ತು ಆಶಯಗಳಿಗೆ ಪೂರಕವಾಗಿರಬೇಕುಎಂದು ಉಪನ್ಯಾಸಕ, ಯಕ್ಷಗಾನ ರಂಗ ನಿರ್ದೇಶಕ ಸದಾಶಿವ ಶೆಟ್ಟಿಗಾರ್ ಹೇಳಿದರು.
ಅವರು ಶನಿವಾರ ಸಿದ್ಧಕಟ್ಟೆ ಸರಕಾರಿ ಪ್ರಮ ದರ್ಜೇ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಯಕ್ಷಗಾನದಲ್ಲಿ ಪಾತ್ರ, ವೇಷಭೂಷಣ ಮತ್ತು ಬಣ್ಣಗಾರಿಕೆ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು.
ಸಮಾರಂಭ ಉದ್ಘಾಟಿಸಿದ ಡಾ. ಪಿ. ದಯಾನಂದ ಪೈ ಮತ್ತು ಪಿ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಯಕ್ಷಗಾನ ಪ್ರದರ್ಶನಗಳಿಗೆ ಹೋಲಿಸಿದರೆ ಯಕ್ಷಗಾನದ ಕುರಿತು ನಡೆಯುತ್ತಿರುವ ಅಧ್ಯಯನಗಳು ಕಡಿಮೆ. ಯುವಸಮುದಾಯ ಯಕ್ಷಗಾನ ಸಂಬಂಧಿ ಮಾಹಿತಿ, ದಾಖಲೆಗಳ ಸಂಗ್ರಹ, ವಿಶ್ಲೇಷಣೆ ಹಾಗೂ ಸಂಶೋಧನೆಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕೇಂದ್ರದ ಸಂಶೋಧನ ಸಹಾಯಕ ಸತೀಶ್ ಕೊಣಾಜೆ ಉಪಸ್ಥಿತರಿದ್ದರು.
ವಾಣಿಜ್ಯ ಉಪನ್ಯಾಸಕ ವಿದ್ಯಾಧರ ಹೆಗ್ಡೆ ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ವಂದಿಸಿದರು. ಉಪನ್ಯಾಸಕಿ ಸ್ನೇಹ ಆಚಾರ್ ನಿರೂಪಿಸಿದರು.