ಭಟ್ಕಳ: ಎಂಆರ್ ಲಸಿಕೆ ವಿವಾದ, ಪಾಲಕರ ಮನವೊಲಿಸಲು ಶಮ್ಸ್ ಶಾಲೆಯಲ್ಲಿ ಸಭೆ

Update: 2017-02-21 15:44 GMT

ಭಟ್ಕಳ, ಫೆ.21: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂ ಶಮ್ಸ್ ಶಾಲೆಯಲ್ಲಿ ದಡಾರ, ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದ ಪಾಲಕರು ಲಸಿಕೆ ನೀಡುವುದನ್ನು ಸ್ಥಗಿತಗೊಳಿಸುವಂತೆ ಮಾಡಿದ್ದರು. ಮಂಗಳವಾರ ಶಾಲಾ ಆಡಳಿತ ಮಂಡಳಿ, ತಾಲೂಕು ಆಡಳಿತ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯಲ್ಲಿ ಸಭೆ ನಡಸುವ ಮೂಲಕ ಪಾಲಕರ ಮನವೊಲಿಸಲು ಯತ್ನಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿ.ಎನ್. ಬಾಡ್ಕರ್, ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ಸರಕಾರ ಹಮ್ಮಿಕೊಂಡಿರುವ ಈ ಲಸಿಕಾ ಅಭಿಯಾನ ಕೆಲವು ತಪ್ಪು ಮಾಹಿತಿಗಳಿಂದಾಗಿ ಜನರಲ್ಲಿ ಗೊಂದಲ ಹುಟ್ಟಿಸುತ್ತಿದೆ. ಲಸಿಕೆಯನ್ನು ನೀಡದೇ ಇದ್ದಲ್ಲಿ ಇಡೀ ದೇಶಕ್ಕೆ ನಷ್ಟವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ.ಮುಹಮ್ಮದ್ ಹನೀಫ್ ಶಬಾಬ್, ದಡಾರ, ರುಬೆಲ್ಲಾ ಲಸಿಕೆ ಕುರಿತಂತೆ ಅಂತರ್ಜಾಲ ಮಾಧ್ಯಮಗಳಲ್ಲಿ ಕೆಲ ಕಿಡಿಗೇಡಿಗಳು ತಪ್ಪು ಮಾಹಿತಿಗಳನ್ನು ಹರಿಬಿಟ್ಟು ಸರಕಾರದ ಯೋಜನೆಗಳಿಂದ ಮುಸ್ಲಿಮರನ್ನು ದೂರವಿಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲ ಯಾರೊಬ್ಬರೂ ಕಿವಿಕೊಡಬಾರದು ಎಂದು ವಿನಂತಿಸಿದರು.

ಮಕ್ಕಳು ತಮ್ಮ ಭವಿಷ್ಯವನ್ನು ಆರೋಗ್ಯ ಪೂರ್ಣವಾಗಿ ನಡೆಸುವಂತಾಗಲು ಈ ಲಸಿಕೆ ನೀಡಲಾಗುತ್ತದೆ. ವಾಸ್ತವದಲ್ಲಿ ಲಸಿಕೆಯಿಂದಾಗಿ ಯಾವುದೇ ಹಾನಿ ಮತ್ತು ರೋಗಗಳು ಉದ್ಭವಿಸಲಾರವು. ಲಸಿಕೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸ ಬೇಕಾಗಬಹುದು. ಯಾವುದೇ ಸರಕಾರಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಅದಕ್ಕೆ ಹಾನಿಯುನ್ನುಂಟು ಮಾಡುವ ಕಾರ್ಯಕ್ಕೆ ಕೈಹಾಕುವುದಿಲ್ಲ ಎಂದರು.

ಎಂಆರ್ ಲಸಿಕೆಯಿಂದ ಯಾವುದೇ ದುಷ್ಟಪರಿಣಾಮ ಉಂಟಾಗದು. ಅಂತರಾಷ್ಟ್ರಿಯ ಪ್ರಯಾಣಕ್ಕೆ ಈ ಲಸಿಕೆ ಹಾಕುವುದು ಕಡ್ಡಾಯವಾಗಿದ್ದು ಇದನ್ನು ಎಲ್ಲರೂ ಯಾವುದೇ ರೀತಿಯ ಗಾಳಿ ಸುದ್ದಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಹಾಕಿಸಿ ಮಕ್ಕಳ ಭವಿಷ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಟಿ.ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಮೂರ್ತಿರಾಜ್ ಭಟ್, ಹಿರಿಯ ಆರೋಗ್ಯ ಸಹಾಯಕ ಎಂ. ಈರಯ್ಯ ದೇವಾಡಿಗ ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ಪ್ರಸ್ತಾವಿಕವಾಗಿ ಮಾತನಾಡಿ, ಲಸಿಕೆ ನೀಡುವ ಮುಂದಿನ ದಿನಾಂಕವನ್ನು ಪಾಲಕರಿಗೆ ತಿಳಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News