×
Ad

ಮೂಡುಬಿದಿರೆ: ಅನಧಿಕೃತ ಕೋಳಿ ಅಂಕದ ಮೇಲೆ ದಾಳಿ, 11 ಜನರ ಬಂಧನ, 15ಕ್ಕೂ ಹೆಚ್ಚು ವಾಹನಗಳ ವಶ

Update: 2017-02-21 21:19 IST

ಮೂಡುಬಿದಿರೆ, ಫೆ.21: ನಾಗರಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕ ಕೇಂದ್ರದ ಮೇಲೆ ಮೂಡುಬಿದಿರೆ ಪೊಲೀಸರು ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂಟಿಕಟ್ಟೆಯ ಮನೆಯೊಂದರ ಕೋಲದ ಪ್ರಯುಕ್ತ ಸೋಮವಾರ ನಾಗರಕಟ್ಟೆಯಲ್ಲಿ ಕೊಳಿ ಅಂಕ ನಡೆದಿತ್ತು. ಮೊದಲ ದಿನ ಪೊಲೀಸರ ಅನುಮತಿಯಿದ್ದು ಕೋಳಿ ಅಂಕ ನಡೆದಿತ್ತೆನ್ನಲಾಗಿದೆ. ಆದರೆ ಎರಡನೇ ದಿನ ಪೊಲೀಸರ ಅನುಮತಿಯಿಲ್ಲದೆ ಕೋಳಿ ಅಂಕ ನಡೆಯಿತ್ತೆನ್ನಲಾಗಿದೆ.

ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಮಂಗಳವಾರ ಮಧ್ಯಾಹ್ನ ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ 11 ಮಂದಿಯನ್ನು ದಸ್ತಗಿರಿ ಮಾಡಿ ಎರಡು ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ದಾಳಿಗೆ ಹೆದರಿ ಹಲವರು ತಮ್ಮ ವಾಹನಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದು, ದ್ವಿಚಕ್ರ ಹಾಗೂ ರಿಕ್ಷಾ ಸೇರಿದಂತೆ 15 ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಮೀನಿನ ಮೇರೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News