×
Ad

ಉಡುಪಿ: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ 'ಆಹಾರ ಮಂಥನ-2017' ರಾಷ್ಟ್ರೀಯ ವಿಚಾರ ಸಂಕಿರಣ

Update: 2017-02-21 23:13 IST

ಉಡುಪಿ, ಫೆ.21: ಉದ್ಯಾವರ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಫೆ.24ರ ಶುಕ್ರವಾರ 'ಆಹಾರ ಮಂಥನ-2017' ಒಂದು ದಿನದ ರಾಷ್ಟ್ರಮಟ್ಟದ ವಿಚಾರಗೋಷ್ಠಿ ಆಯೋಜನೆಗೊಂಡಿದೆ ಎಂದು ಗೋಷ್ಠಿಯ ಸಂಘಟನಾ ಕಾರ್ಯದರ್ಶಿ ಹಾಗೂ ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ಬಿ. ಆರ್.ದೊಡ್ಡಮನಿ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಅಧ್ಯಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮದಿನದ ಸಂಸ್ಮರಣಾರ್ಥವಾಗಿ ಕಾಲೇಜಿನ ಶ್ರೀಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನದ ಱಭಾವಪ್ರಕಾಶೞಸಭಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ಈ ವಿಚಾರಗೋಷ್ಠಿಯನ್ನು ಫೆ.24ರ ಬೆಳಗ್ಗೆ 9:00ಕ್ಕೆ ಹಿರಿಯ ವೈದ್ಯ ಹಾಗೂ ಮಣಿಪಾಲ ವಿವಿಯ ನಿವೃತ್ತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ದೇಶಾದ್ಯಂತದಿಂದ ಬರುವ 500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸ್ನಾತಕ ವಿದ್ಯಾರ್ಥಿಗಳಿಗೆ ಆಹಾರ ವರ್ಗವೆಂಬ ಮಾದರಿ ರಚನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈವರೆಗೆ 15ಕ್ಕೂ ಹೆಚ್ಚು ಮಾದರಿಗಳು ನೊಂದಾಯಿಸಲ್ಪಟ್ಟಿವೆ ಎಂದು ಡಾ.ದೊಡ್ಡಮನಿ ತಿಳಿಸಿದರು.

ಅದೇ ದಿನ ಸಂಜೆ 4:30ಕ್ಕೆ ಸಮಾರೋಪ ನಡೆಯಲಿದ್ದು, ಎಸ್‌ಡಿಎಂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ರವಿಶಂಕರ ಬಿ. ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಉಪಸ್ಥಿತರಿರುವರು.

ವಿವಿಧ ವ್ಯಾಧಿಗಳಲ್ಲಿ ಪಥ್ಯ, ಅಪಥ್ಯ ಮತ್ತು ಶರೀರ ಪೋಷಣೆಯ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಿವೆ ಎಂದು ಡಾ.ಬಿ.ಆರ್.ದೊಡ್ಡಮನಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಆರ್.ರಾಮಚಂದ್ರ, ಡಾ.ಯೋಗೇಶ್ ಆಚಾರ್ಯ, ಡಾ.ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News