ಮೂಡುಬಿದಿರೆಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ
Update: 2017-02-22 12:54 IST
ಮೂಡುಬಿದಿರೆ, ಫೆ.22: ರಸ್ತೆಯಲ್ಲಿ ಸಂಚರಿಸುತ್ತಿದ್ದ ಓಮ್ನಿ ಕಾರೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಪೇಟೆಯ ಸಮೀಪವಿರುವ ಸ್ವರಾಜ್ಯ ಮೈದಾನದ ಬಳಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಸಚ್ಚೇರಿಪೇಟೆಯ ನಿವಾಸಿ ಅಶ್ರಫ್ ಎಂಬವರ ಒಡೆತನದ ಕಾರು ಇದಾಗಿದೆ. ಅವರು ತನ್ನ ಮನೆಯಿಂದ ರಿಂಗ್‌ರೋಡ್ ಮೂಲಕ ಮೂಡುಬಿದಿರೆ ಪೇಟೆಗೆ ಬರುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿದೆ.
ಸ್ವರಾಜ್ಯ ಮೈದಾನದ ಬಳಿ ತಾಂತ್ರಿಕ ದೋಷದ ಕಾರಣ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಜಾಗೃತರಾದ ಅಶ್ರಫ್ ಕೂಡಲೇ ಕಾರಿನಿಂದ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಇಂಜಿನ್ ಬೆಂಕಿಗಾಹುತಿಯಾಗಿದ್ದು, ಅದರ ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮೂಡುಬಿದಿರೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.