'ಪಾದುವ ವರ್ವ್-2017' ಅಂತರ್ ಕಾಲೇಜು ಫೆಸ್ಟ್
ಮಂಗಳೂರು, ಫೆ.22: ಹಕ್ಕಿಯಂತೆ ಆಕಾಶದಲ್ಲಿ ಹಾರಬಹುದು, ಮೀನಿನಂತೆ ನೀರಿನಲ್ಲಿ ಈಜಬಹುದು, ಆದರೆ ಮನುಷ್ಯನಂತೆ ಭೂಮಿಯ ಮೇಲೆ ಬಾಳುವುದು ಕಷ್ಟ. ಹಾಗೆಯೇ ಇಂದಿನ ದಿನವನ್ನು ಹಾಳು ಮಾಡದೆ, ಮನಸ್ಸಿಟ್ಟು ಕೆಲಸ ಮಾಡಬೇಕು ಎಂದು ಡೆಕ್ಕನ್ ಹೆರಾಲ್ಡ್‌ನ ವಲಯ ಸಂಚಾಲಕ ಡಾ.ರೊನಾಲ್ಡ್ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಪಾದುವ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಸ್ಪರ್ಧೆ 'ಪಾದುವ ವರ್ವ್-2017'ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್, ಮಾತನಾಡಿ, ಶಿಕ್ಷಣವೇ ಇಂದಿನ ಯುಗದ ಅತ್ತ್ಯುನ್ನತವಾದ ಕಾಣಿಕೆ. ಇದನ್ನು ಸರಿಯಾಗಿ ವಿನಿಯೋಗಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ರೆ.ಫಾ.ಆ್ಯಂಟನಿ ಸೆರಾರ, ವಿದ್ಯಾರ್ಥಿಗಳಿಗೆ ಶುಭ ಸಂದೇಶ ನೀಡಿ ಆಶೀರ್ವದಿಸಿದರು.
ಪಾದುವ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಆಲ್ವಿನ್ ಸೆರಾವೊ ಅತಿಥಿಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಸ್ವಾಗತ ಕೋರಿದರು.
ಮಂಗಳೂರು ವಿಶ್ವವಿದ್ಯಾನಿಲಯದ 16 ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆಳ್ವಾಸ್ ಕಾಲೇಜು ಅತ್ತ್ಯುತ್ತಮ ತಂಡವಾಗಿ ಹೊರಹೊಮ್ಮಿ, ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡೊಲ್ಪಿ ಡಿಸೋಜ, ಮ್ಯಾನೇಜರ್ ಡಿಸೈನ್ ಹೋಮ್ಸ್, ಮಂಗಳೂರು ಇವರು ವಹಿಸಿದ್ದರು.
ಉಪಪ್ರಾಂಶುಪಾಲ ರೋಶನ್ ಸಾಂತುಮಾಯೆರ್, ಸಂಯೋಜಕ ಝೀನಾ, ವಿದ್ಯಾರ್ಥಿ ನಾಯಕ ಕೀತ್ ವೇಗಸ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಧ್ಯಾ, ಗಿಲ್ಬರ್ಟ್, ಬ್ಲೇಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೆರಿಸ್ಸಾ, ವಿವನ್, ಎಲ್ವಿಟಾ, ಆ್ಯಸ್ಟನ್ ಕಾರ್ಯಕ್ರಮ ನಿರೂಪಿಸಿದರು. ಕೀತ್ ವೇಗಸ್ ವಂದಿಸಿದರು.