ಪಡಿತರ ಚೀಟಿ ಪರಿಶೀಲನಾ ಕಾರ್ಯದಿಂದ ಮುಕ್ತಗೊಳಿಸಿ: ಗ್ರಾಮ ಲೆಕ್ಕಾಧಿಕಾರಿಗಳಿಂದ ಡಿಸಿಗೆ ಮನವಿ
ಮಂಗಳೂರು, ಫೆ.22: ಪಡಿತರ ಚೀಟಿ ಪರಿಶೀಲನಾ ಕಾರ್ಯದಿಂದ ಮುಕ್ತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ದ.ಕ.ಜಿಲ್ಲಾ ಸಮಿತಿ ಬುಧವಾರ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ವಹಿಸಲಾಗಿದ್ದ ಪಡಿತರ ಚೀಟಿ ಪರಿಶೀಲನಾ ಕಾರ್ಯವನ್ನು ರದ್ದುಗೊಳಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಲಾಗಿದೆ. ಆದರೆ, ಇದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹೆಚ್ಚುವರಿ ಹೊರೆಯಾಗಲಿದೆ. ಪ್ರಸ್ತುತ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿವಿಧ ಅರ್ಜಿಗಳ ವಿಲೇವಾರಿ ಕಾರ್ಯವಿದೆ. ಕೆಲಸದ ಒತ್ತಡದಿಂದ ಪಡಿತರ ಚೀಟಿ ಪರಿಶೀಲನಾ ಕಾರ್ಯ ಅಸಾಧ್ಯ. ಹಾಗಾಗಿ ಈ ಕಾರ್ಯದಿಂದ ಮುಕ್ತಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ.
ಈ ಸಂದರ್ಭ ಕಂದಾಯ ನೌಕರರ ಸಂಘದ ಅಧ್ಯಕ್ಷ ಹಾಗು ಉಪತಹಶೀಲ್ದಾರ್ ಸೀತಾರಾಮ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಂಗಳೂರು ತಾಲೂಕು ಅಧ್ಯಕ್ಷ ಸಿ.ಆರ್.ಮಹೇಶ್, ಬಂಟ್ವಾಳ ತಾಲೂಕು ಅಧ್ಯಕ್ಷ ಜನಾರ್ದನ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರದೀಪ್, ಸುಳ್ಯ ತಾಲೂಕು ಅಧ್ಯಕ್ಷ ಹೊನ್ನಪ್ಪ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು.