ಬಿಜೆಪಿ ನಾಯಕನ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವೆ: ಬಿನೀಷ್ ಕೊಡಿಯೇರಿ
ಕೊಚ್ಚಿ,ಫೆ. 22: ನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ತನ್ನ ವಿರುದ್ಧ ಆರೋಪ ಹೊರಿಸಿದ ಬಿಜೆಪಿ ಕೇರಳ ಪ್ರಧಾನಕಾರ್ಯದರ್ಶಿ ಎ.ಎನ್. ರಾಧಾಕೃಷ್ಣನ್‌ರ ವಿರುದ್ಧ ಮಾನನಷ್ಟ ಕೇಸು ದಾಖಲಿಸುವೆ ಎಂದು ಕಮ್ಯುನಿಷ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರವರ ಪುತ್ರ ಬಿನೀಷ್ ಕೊಡಿಯೇರಿ ಹೇಳಿದ್ದಾರೆ. ಪ್ರಕರಣದಲ್ಲಿ ತನ್ನ ಹೆಸರನ್ನು ಅನವಶ್ಯಕವಾಗಿ ಎಳೆದು ತರಲಾಗಿದೆ ಎಂದು ಕೊಡಿಯೇರಿ ಹೇಳಿದ್ದಾರೆ.
ನಟಿಯನ್ನು ಅಪಹರಿಸಿದ್ದರ ಹಿಂದೆ ಬಿನೀಷ್ ಕೊಡಿಯೇರಿ ಇದ್ದಾರೆ ಎಂದು ರಾಧಾಕೃಷ್ಣನ್ ನಿನ್ನೆ ಹೇಳಿದ್ದರು. ಇದರ ಕುರಿತು ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕೆಂದು ಅವರು ಹೇಳಿದ್ದರು. ಘಟನೆಯ ಕುರಿತು ಕೊಡಿಯೇರಿ ಬಾಲಕೃಷ್ಣನ್ ನೀಡಿದ ಹೇಳಿಕೆ ತನ್ನ ಪುತ್ರ ಬಿನೀಷ್‌ರನ್ನು ರಕ್ಷಿಸುವ ಉದ್ದೇಶದಿಂದ ಕೂಡಿದೆ ಎಂದು ರಾಧಾಕೃಷ್ಣನ್ ಆರೋಪಿಸಿದರು. ಇದರ ವಿರುದ್ಧ ಕೊಡಿಯೇರಿ ಬಿನೀಷ್ ಬಿಜೆಪಿ ನಾಯಕ ರಾಧಾಕೃಷ್ಣನ್ ವಿರುದ್ಧ ಮಾನನಷ್ಟ ಕೇಸು ದಾಖಲಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆಂದು ವರದಿಯಾಗಿದೆ.