×
Ad

ಫೆ.27: ಗ್ರಾಮಸ್ಥರಿಂದ ಹೊಸಬೆಟ್ಟು ಗ್ರಾಪಂಗೆ ಮುತ್ತಿಗೆ

Update: 2017-02-22 16:21 IST

ಮೂಡುಬಿದಿರೆ, ಫೆ.22: ಗ್ರಾಮಸ್ಥರ ಗಮನಕ್ಕೆ ತರದೆ ಏಕಾಏಕಿ ಮನೆ ತೆರಿಗೆಯನ್ನು ಹೆಚ್ಚಿಸಿರುವುದಕ್ಕೆ ಮತ್ತು ಪಂಚಾಯತ್ ಅಧ್ಯಕ್ಷರು, ಕೆಲವು ಸದಸ್ಯರು ಹಾಗೂ ಅಧಿಕಾರಿ ವರ್ಗದವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಫೆ.27ರಂದು ಹೊಸಬೆಟ್ಟು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಮತ್ತು ಪ್ರತಿಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ಲಿಯೋ ವಾಲ್ಟರ್ ನಝ್ರತ್ ಹೇಳಿದ್ದಾರೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಅವರು ಮಾತನಾಡಿದರು.

ಹೊಸಬೆಟ್ಟು ಗ್ರಾ.ಪಂಚಾಯತ್ ಇತ್ತೀಚೆಗೆ ಸುಮಾರು ಶೇ.300ರಷ್ಟು ಮನೆ ತೆರಿಗೆಯನ್ನು ಹೆಚ್ಚಿಸಿದ್ದು, ಇದನ್ನು ಕಡಿಮೆಗೊಳಿಸುವಂತೆ ಮತ್ತು ಈ ಬಗ್ಗೆ ವಿಶೇಷ ಗ್ರಾಮಸಭೆ ಕರೆಯುವಂತೆ ಗ್ರಾಮಸ್ಥರ ಪರವಾಗಿ ಪಂಚಾಯತ್‌ಗೆ ಫೆ.13ರಂದು ಮನವಿ ನೀಡಲಾಗಿದೆ. ಆದರೆ ಫೆ.20ರಂದು ಮನವಿಗೆ ಸಹಿ ಹಾಕಿದ ಎಲ್ಲ ಗ್ರಾಮಸ್ಥರನ್ನು ಕರೆಯಿಸಿ ಯಾವ ಕಾರಣಕ್ಕೂ ಹೆಚ್ಚಿಸಿರುವ ಮನೆ ತೆರಿಗೆಯನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲವೆಂದೂ ಹಾಗೂ ವಿಶೇಷ ಗ್ರಾಮಸಭೆ ಕರೆಯುವುದಿಲ್ಲವೆಂದು ಹೇಳುವ ಮೂಲಕ ಅಧ್ಯಕ್ಷರು ಮತ್ತು ಸದಸ್ಯರು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ನಜ್ರತ್ ಆರೋಪಿಸಿದರು.

ಇತರ ಪಂಚಾಯತ್‌ಗಳಂತೆ ಹೊಸಬೆಟ್ಟು ಪಂಚಾಯತ್‌ಗೆ ಯಾವುದೇ ಆದಾಯ ಇಲ್ಲವೆಂದು ಹೇಳುವ ಪಂಚಾಯತ್‌ನವರು, ಪುಚ್ಚಮೊಗರು ನದಿಯಿಂದ ಹಲವು ಲೋಡ್ ಮರಳನ್ನು ಬೆಂಗಳೂರು ಕಡೆಗೆ ಸಾಗಿಸುತ್ತಿದ್ದು, ಇದರ ರಾಜಸ್ವ ಯಾರಿಗೆ ನೀಡಿದ್ದಾರೆ? ಇದರಿಂದ ಪಂಚಾಯತ್‌ಗೆ ಆದಾಯ ಬರುವುದಿಲ್ಲವೇ? ಎಂದವರು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರ, ಬಿಜೆಪಿ ದ.ಕ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೊಯ್ಲಸ್ ಡಿಸೋಜ, ಗ್ರಾಮಸ್ಥರಾದ ಶ್ಯಾಮ್ ಮಡಿವಾಳ, ವಿಲ್ಫ್ರೆಡ್ ಮೆಂಡೋನ್ಸಾ, ಭಾಸ್ಕರ ಆಚಾರ್ಯ, ಸಚೀಂದ್ರ ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News