ಆಟೋ ಹತ್ತುತ್ತಿದ್ದ ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ ಬಂಧನ

Update: 2017-02-22 11:41 GMT

ಮುಂಬೈ,ಫೆ.22: ಮಲಾಡ್ ನಿವಾಸಿ, ಇಬ್ಬರು ಮಕ್ಕಳ ತಾಯಿಯಾದ ಮಹಿಳೆಯನ್ನು ಆಕೆ ಆಟೋ ಹತ್ತುತ್ತಿದ್ದಾಗ ಸ್ವಂತ ಗಂಡನೇ ಕತ್ತನ್ನು ಸೀಳಿ ಹತ್ಯೆಗೈದಿದ್ದಾನೆ. ಕೊಲೆಯಾಗಿರುವ ಗೀತಾ ದುಬೆ(28)ಯ ಪತಿ ಪ್ರಸಾದ್ ರಾವತ್(30)ನನ್ನು ಬಂಧಿಸಲಾಗಿದೆ.

ಕೌಟುಂಬಿಕ ವಿವಾದ ಈ ಕೃತ್ಯಕ್ಕೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಗೋರೆಗಾಂವ್ ಡಿಸಿಪಿ ವಿಕ್ರಮ ದೇಶಮಾನೆ ತಿಳಿಸಿದರು.

ಸೋಮವಾರ ರಾತ್ರಿ ಕೆಲಸ ಮುಗಿದ ಬಳಿಕ ಲೋಕಲ್ ರೈಲಿನಲ್ಲಿ ಮಲಾಡ್ ನಿಲ್ದಾಣಕ್ಕೆ ಬಂದಿಳಿದ ಗೀತಾ ದುಬೆ ಮಲಾಡ್(ಪಶ್ಚಿಮ)ನಲ್ಲಿರುವ ತಾಯಿಯ ಮನೆಗೆ ತೆರಳಲು ಆಟೋ ಹತ್ತುತ್ತಿದ್ದಳು. ಈ ವೇಳೆ ದಿಢೀರನೆ ಪ್ರತ್ಯಕ್ಷನಾಗಿದ್ದ ರಾವತ್ ಚೂರಿಯಿಂದ ಮೊದಲು ಆಕೆಯ ಕತ್ತನ್ನು ಸೀಳಿ,ಬಳಿಕ ಎದೆಗೆ ತಿವಿದು ಪರಾರಿಯಾಗಿದ್ದ. ಆಟೋ ಚಾಲಕ ಗೀತಾಳನ್ನು ಆಸ್ಪತ್ರೆಗೆ ಸಾಗಿಸಿದನಾದರೂ ವಿಪರೀತ ರಕ್ತಸ್ರಾವದಿಂದ ಆಕೆ ಕೊನೆಯುಸಿರೆಳೆದಿದ್ದಳು.

ರಾವತ್‌ಗಾಗಿ ಬಲೆ ಬೀಸಿದ್ದ ಪೊಲೀಸರು ಮಂಗಳವಾರ ಬೆಳಿಗ್ಗೆ ಆತನನ್ನು ಬಂಧಿಸಿದ್ದಾರೆ. ಗೀತಾಗೆ ಒಂದು ಮತ್ತು ಮೂರು ವರ್ಷದ ಇಬ್ಬರು ಪುತ್ರಿಯರಿದ್ದಾರೆ.

ಪತಿ-ಪತ್ನಿ ಪ್ರತ್ಯೇಕವಾಗಿ ವಾಸವಿದ್ದರು. ಆದರೆ ರಾವತ್ ತಾಯಿಯೊಂದಿಗಿದ್ದ ಗೀತಾಳನ್ನು ಆಗಾಗ್ಗೆ ಭೇಟಿಯಾಗುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News