×
Ad

'ಪಾಕ್ ಭಯೋತ್ಪಾದಕ ದೇಶ' ಘೋಷಣೆಗೆ ಮೋದಿ ಸರ್ಕಾರದ ವಿರೋಧ

Update: 2017-02-22 16:36 IST

ಹೊಸದಿಲ್ಲಿ,ಫೆ.22: ಪಾಕಿಸ್ತಾನದಂತಹ ದೇಶಗಳನ್ನು ಭಯೋತ್ಪಾದಕ ರಾಷ್ಟ್ರಗಳೆಂದು ಘೋಷಿಸಬೇಕು ಎಂದು ಕೋರಿ ಪಕ್ಷೇತರ ಸದಸ್ಯ ರಾಜೀವ ಚಂದ್ರಶೇಖರ ಅವರು ಇತ್ತೀಚಿಗೆ ಮಂಡಿಸಿರುವ ಮಸೂದೆಯನ್ನು ಕೇಂದ್ರವು ವಿರೋಧಿಸಲಿದೆ.

ಚಂದ್ರಶೇಖರ ಅವರು ಮಂಡಿಸಿರುವ,ಭೀತಿವಾದವನ್ನು ಉತ್ತೇಜಿಸುವ ರಾಷ್ಟ್ರಗಳ ನಾಗರಿಕರ ಮೇಲೆ ಕಾನೂನಾತ್ಮಕ,ಆರ್ಥಿಕ ಮತ್ತು ಪ್ರವಾಸ ನಿರ್ಬಂಧಗಳನ್ನು ಹೇರಲು ‘ಭೀತಿವಾದ ಪ್ರಾಯೋಜಕ ಮಸೂದೆ,2016 ’ಅನ್ನು ಫೆ.3ರಂದು ಚರ್ಚೆಗೆತ್ತಿಕೊಳ್ಳಲಾಗಿತ್ತು.

  ಈ ಮಸೂದೆಯು ಜಿನೆವಾ ನಿರ್ಣಯದಡಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಹದಗೆಡಿಸುವುದರಿಂದ ತಾನು ಅದನ್ನು ವಿರೋಧಿಸುತ್ತೇನೆ ಎಂದು ಗೃಹ ಸಚಿವಾಲಯವು ಸಂಸತ್ ಸಚಿವಾಲಯಕ್ಕೆ ಪತ್ರವನ್ನು ಬರೆದಿದೆ.

 ನೆರೆಯ ದೇಶದೊಂದಿಗೆ ನಾವು ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದು, ರಾಯಭಾರಿ ಕಚೇರಿಗಳು ಮತ್ತು ವ್ಯಾಪಾರ ಬಾಂಧವ್ಯಗಳು ಇದರಲ್ಲಿ ಸೇರಿವೆ. ಭಾರತವು ಅಂತರರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿರುವುದರಿಂದ ಯಾವುದೇ ದೇಶವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವುದು ಬುದ್ಧಿವಂತಿಕೆಯಲ್ಲ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಹೇಳಿದರು.

ಸಂಬಂಧ ಮುಂದುವರಿಕೆ

ಪಾಕಿಸ್ತಾನವು ಭಯೋತ್ಪಾದಕ ದಾಳಿಗಳನ್ನು ಪ್ರಚೋದಿಸುತ್ತಿದೆ ಎಂದು ಭಾರತವು ಆರೋಪಿಸಿದೆಯಾದರೂ ಕಾರ್ಗಿಲ್ ಯುದ್ಧ ಮತ್ತು ಆಪರೇಷನ್ ಪರಾಕ್ರಮ್‌ನಂತಹ ಸಂದರ್ಭಗಳಲ್ಲಿಯೂ ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಂಡಿವೆ.

ಭಾರತವು ಕಳೆದ ವರ್ಷ ತಮ್ಮ ಮಕ್ಕಳನ್ನು ಪಾಕಿಸ್ತಾನದಲ್ಲಿಯ ಶಾಲೆಗಳಿಗೆ ಕಳುಹಿಸದಂತೆ ಮತ್ತು ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಅಲ್ಲಿಯ ತನ್ನ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳಿಗೆ ಸೂಚಿಸಿತ್ತು.

ದಶಕಗಳಿಂದಲೂ ಭಾರತ ಮತ್ತು ಪ್ರದೇಶದಲ್ಲಿಯ ಇತರ ರಾಷ್ಟ್ರಗಳು ಪಾಕಿಸ್ತಾನ ಮೂಲದ ಗುಂಪುಗಳ ಭಯೋತ್ಪಾದಕ ದಾಳಿಗಳಿಗೆ ಬಲಿಪಶುಗಳಾಗುತ್ತಿವೆ. ಆದರೂ ಪಾಕಿಸ್ತಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿ ನಾವು ದಶಕಗಳಿಂದಲೂ ಅದರೊಂದಿಗೆ ಸಂಬಂಧವನ್ನು ಮುಂದುವರಿಸಿದ್ದೇವೆ. ಪಾಕಿಸ್ತಾನವು ಸುದೀರ್ಘ ಸಮಯದಿಂದಲೂ ಭೀತಿವಾದವನ್ನು ಮತ್ತು ಭಯೋತ್ಪಾದಕರನ್ನು ಪೋಷಿಸುತ್ತಿದೆ ಎನ್ನುವುದು ನಿರ್ವಿವಾದವಾಗಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಂತೆ ಇತರ ರಾಷ್ಟ್ರಗಳಿಗೆ ದುಂಬಾಲು ಬೀಳುವುದನ್ನು ಬಿಟ್ಟು ನಾವೇ ಈ ಕೆಲಸ ಮಾಡುವ ಕಾಲವೀಗ ಬಂದಿದೆ ಎಂದು ಮಸೂದೆ ಮಂಡನೆ ಸಂದರ್ಭ ಚಂದ್ರಶೇಖರ್ ಹೇಳಿದ್ದರು.

ಖಾಸಗಿ ಸದಸ್ಯರು ಮಂಡಿಸುವ ಮಸೂದೆ ಸದನ ಸಮಿತಿಯಿಂದ ಪರಿಶೀಲಿಸಲ್ಪಟ್ಟು ಬಹುಮತದಿಂದ ಅಂಗೀಕಾರಗೊಂಡರೆ ಅದನ್ನು ಶಾಸನವನ್ನಾಗಿ ಜಾರಿಗೊಳಿಸಬಹುದು. ಸಂಸತ್ ಅಧಿವೇಶನ ಮಾ,9ರಂದು ಪುನರಾರಂಭಗೊಳ್ಳಲಿದ್ದು, ಚಂದ್ರಶೇಖರ ಅವರ ಮಸೂದೆಯು ಪುನಃ ಚರ್ಚೆಗೆ ಬರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News