×
Ad

ದಿಲ್ಲಿ :ಎಐಎಸ್‌ಎ-ಎಬಿವಿಪಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

Update: 2017-02-22 18:02 IST

ಹೊಸದಿಲ್ಲಿ, ಫೆ.22: ದಿಲ್ಲಿಯ ರಮಜಸ್ ಕಾಲೇಜಿನಲ್ಲಿಯ ಕಾರ್ಯಕ್ರಮವೊಂದಕ್ಕೆ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ಅವರಿಗೆ ನೀಡಿದ್ದ ಆಹ್ವಾನವನ್ನು ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಬುಧವಾರ ಕಾಲೇಜಿನ ಕ್ಯಾಂಪಸ್‌ನಲ್ಲಿ ಎಡರಂಗ ಬೆಂಬಲಿತ ಎಐಎಸ್‌ಎ ಮತ್ತು ಆರೆಸ್ಸೆಸ್ ಬೆಂಬಲಿತ ಎಬಿವಿಪಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ.

 ಮಂಗಳವಾರ ರಮಜಸ್ ಕಾಲೇಜಿನ ಸಾಹಿತ್ಯ ಸಂಘವು ಏರ್ಪಡಿಸಿದ್ದ 'ಪ್ರತಿಭಟನೆಯ ಸಂಸ್ಕೃತಿಗಳು ' ವಿಚಾರ ಸಂಕಿರಣದಲ್ಲಿ ಮಧ್ಯಾಹ್ನ ನಡೆಯಲಿದ್ದ 'ಆದಿವಾಸಿ ಪ್ರದೇಶಗಳಲ್ಲಿ ಯುದ್ಧ ' ಕುರಿತು ಖಾಲಿದ್ ಮಾತನಾಡಲಿದ್ದರು. ಆದರೆ ಅವರ ಪಾಲ್ಗೊಳ್ಳುವಿಕೆಯ ವಿರುದ್ಧ ದಿಲ್ಲಿ ವಿವಿ ವಿದ್ಯಾರ್ಥಿ ಸಂಘ ಮತ್ತು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ವ್ಯತ್ಯಯವನ್ನುಂಟು ಮಾಡಿದ್ದರು ಮತ್ತು ಅಂತಿಮವಾಗಿ ಖಾಲಿದ್ ಮತ್ತು ಶೆಹ್ಲಾ ರಶೀದ್ ಅವರಿಗೆ ನೀಡಿದ್ದ ಆಹ್ವಾನವನ್ನು ಹಿಂದೆಗೆದುಕೊಂಡ ಪ್ರಾಂಶುಪಾಲ ರಾಜೇಂದ್ರ ಪ್ರಸಾದ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.

ಕಳೆದ ವರ್ಷ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಜೆಎನ್‌ಯುದಲ್ಲಿನ ಘಟನಾವಳಿಗಳ ಸಂದರ್ಭ ಖಾಲಿದ್ ಮತ್ತು ಇತರರ ವಿರುದ್ಧ ದಿಲ್ಲಿ ಪೊಲೀಸರು ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಂಡಿದ್ದರು ಮತ್ತು ಶೆಹ್ಲಾ ಬಂಧಿತ ವಿದ್ಯಾರ್ಥಿಗಳ ಬಿಡುಗಡೆಗಾಗಿ ನಡೆದಿದ್ದ ಆಂದೋಲನದ ಮುಖವಾಗಿದ್ದರು.

 ಕಾರ್ಯಕ್ರಮಕ್ಕೆ ವ್ಯತ್ಯಯವನ್ನು ವಿರೋಧಿಸಿ ರಮಜಸ್ ಕಾಲೇಜು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆಯಲ್ಲಿ ತೊಡಗಿದ್ದು, ಇದೇ ವೇಳೆ ಒತ್ತಡಕ್ಕೆ ಮಣಿಯುವ ಕಾಲೇಜಿನ ನಿರ್ಧಾರ ಮತ್ತು ವಾಕ್ ಸ್ವಾತಂತ್ರಕ್ಕೆ ಬೆದರಿಕೆಯಿಂದ ಕೆರಳಿದ್ದ ಕಾಲೇಜಿನ ಒಂದು ವರ್ಗದ ಬೋಧಕರು,ವಿದ್ಯಾರ್ಥಿಗಳು ಮತ್ತು ಎಐಎಸ್‌ಎ ಸದಸ್ಯರು ಮಂಗಳವಾರ ಕ್ಯಾಂಪಸ್‌ನಲ್ಲಿ ದಾಂಧಲೆ ನಡೆಸಿದ್ದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೌರಿಸ್ ಪೊಲೀಸ್ ಠಾಣೆಗೆ ಜಾಥಾ ಹಮ್ಮಿಕೊಂಡಿದ್ದರು.

 ಅವರನ್ನು ಎಬಿವಿಪಿ ಕಾರ್ಯಕರ್ತರು ತಡೆದಾಗ ಎಐಎಸ್‌ಎ ಮತ್ತು ಎಬಿವಿಪಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News