ಸುಳ್ಯ: ಹಾಡುಹಗಲೇ ಮನೆಗೆ ನುಗ್ಗಿ ಯುವತಿಯ ಚಿನ್ನಾಭರಣ ದರೋಡೆ
ಸುಳ್ಯ, ಫೆ.22: ಹಾಡುಹಗಲೇ ಮನೆಗೆ ನುಗ್ಗಿ ಯುವತಿಯ ಚಿನ್ನಾಭರಣ ದೋಚಿದ ಘಟನೆ ಬುಧವಾರ ಸುಳ್ಯ ಸಮೀಪದ ಸೋಣಂಗೇರಿ ಎಂಬಲ್ಲಿ ಸಂಭವಿಸಿದೆ.
ಸೋಣಂಗೇರಿ ಸಮೀಪದ ಮಿತ್ತಮಜಲು ಎಂಬಲ್ಲಿನ ದೇವರಾಜ್ ಎಂಬವರ ಮನೆಗೆ ನುಗ್ಗಿದ ಅಪರಿಚಿತನೋರ್ವ ಮನೆಯಲ್ಲಿದ್ದ ಅವರ ಪುತ್ರಿಗೆ ಚೂರಿ ತೋರಿಸಿ, ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಅಪಹರಿಸಿದ್ದಾನೆ.
ಬೆಳಗ್ಗೆ 8:30ರ ವೇಳೆಗೆ ಈ ಕೃತ್ಯ ನಡೆದಿದ್ದು, ಈ ವೇಳೆ ದೇವರಾಜ್ ಹಾಗೂ ಅವರ ಪತ್ನಿ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದರು. ಕಾಲೇಜು ವಿದ್ಯಾರ್ಥಿನಿಯಾಗಿರುವ ಪುತ್ರಿ ರಜೆ ಇದ್ದುದರಿಂದ ಮನೆಯಲ್ಲಿಯೇ ಇದ್ದರು. ಮುಖಕ್ಕೆ ಮುಸುಕು ಧರಿಸಿದ ಅಪರಿಚಿತ ಆರಂಭದಲ್ಲಿ ಮನೆಗೆ ಕಲ್ಲೆಸೆದಿದ್ದು, ಆಕೆ ಹೊರಗೆ ಬಂದು ನೋಡಿದಾಗ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.
ಆರೋಪಿ ಬಳಸಿದ್ದ ಚೂರಿ ಮನೆಯಿಂದ ಸುಮಾರು 150ಮೀ ದೂರದ ಕಾಡಿನಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ. ದೀಕ್ಷಾ ಸುಳ್ಯದ ಖಾಸಾಗಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದು, ಪರೀಕ್ಷೆ ಇದ್ದ ಕಾರಣ ಓದಲು ರಜೆ ಇತ್ತು.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ದಳ ಆಗಮಿಸಿದ್ದು, ಸುಳ್ಯ ವೃತ್ತ ನಿರೀಕ್ಷಕ ಕೃಷ್ಣಯ್ಯ, ಉಪ ವೃತ್ತ ನಿರಿಕ್ಷಕ ಚಂದ್ರಶೇಖರ್ ಹೆಚ್.ವಿ., ಕ್ರೈಂ ಎಸ್.ಐ. ಪುರುಷೋತ್ತಮ ಮತ್ತು ಪೋಲಿಸ್ ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸಿದ್ದು, ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಶೊಧಕ್ಕೆ ಬಲೆ ಬೀಸಿದ್ದಾರೆ.