ಕಾಪು: ಕೊಳವೆ ಬಾವಿ ಸಮಸ್ಯೆ, ಕಟಪಾಡಿ ಗ್ರಾಪಂಗೆ ಮುತ್ತಿಗೆ
ಕಾಪು, ಫೆ.22: ಕಟಪಾಡಿ ಗ್ರಾಪಂ ವ್ಯಾಪ್ತಿಯ ಜೆಎನ್ ನಗರ ಜನತಾ ಕಾಲನಿಯಲ್ಲಿರುವ ಕೊಳವೆ ಬಾವಿಯಿಂದ ನೀರು ತೆಗೆಯುವುದಕ್ಕೆ ಸ್ಥಳಿಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ವಿರೋಧಿಸಿ ಸ್ಥಳೀಯ ನಾಗರಿಕರು ಬುಧವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜನತಾ ಕಾಲನಿಗೆ ಕುಡಿಯುವ ನೀರು ಸರಬರಾಜು ಮಾಡಲು ಇಲ್ಲಿ ಕೊಳವೆ ಬಾವಿ ನಿರ್ಮಿಸಲಾಗಿತ್ತು. ಇದರಿಂದ ತಮ್ಮ ಬಾವಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ನಿವಾಸಿ ರಾಜು ಮಾಸ್ಟರ್ ಆಕ್ಷೇಪ ವ್ಯಕ್ತಪಡಿಸಿ, ಕೊಳವೆ ಬಾವಿಯಿಂದ ನೀರು ತೆಗೆಯದಂತೆ ಗ್ರಾಪಂ, ಜಿಪಂ ಹಾಗೂ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಜಿ.ಪಂ ಅಧ್ಯಕ್ಷರು ಈ ಕೊಳವೆ ಬಾವಿಯಿಂದ ನೀರು ತೆಗೆಯದಂತೆ ಕಟಪಾಡಿ ಪಿಡಿಓಗೆ ನಿರ್ದೇಶನ ನೀಡಿದ್ದರು.
ಇದರಿಂದ ಅಸಮಾಧಾನಗೊಂಡ ಸ್ಥಳೀಯ ಮಹಿಳೆಯರು ಹಾಗೂ ಯುವಕರು ಖಾಲಿ ಕೊಡ ಬಕೆಟ್‌ಗಳನ್ನು ಹಿಡಿದುಕೊಂಡು ಗ್ರಾಪಂ ಕಚೇರಿಗೆ ನುಗ್ಗಿ ಧರಣಿ ಕುಳಿತರು.
ಈ ಹಿನ್ನೆಲೆಯಲ್ಲಿ ಆಕ್ಷೇಪ ಸಲ್ಲಿಸಿದ್ದ ರಾಜು ಮಾಸ್ಟರ್‌ರನ್ನು ಕಚೇರಿಗೆ ಕರೆಸಿ ಸಂದಾನ ಸಭೆ ನಡೆಸಲಾಯಿತು. ಬೋರ್‌ವೆಲ್‌ನಿಂದ ನೀರು ಬಿಡುವುದರಿಂದ ಅವರ ಮನೆ ಬಾವಿಗೆ ತೊಂದರೆಯಾದರೆ ಅದನ್ನು ಪುನರ್‌ಚೇತನಗೊಳಿಸುವುದು, ಒಂದೊಮ್ಮೆ ಬಾವಿ ಪೂರ್ತಿ ಬತ್ತಿ ಹೋದರೆ ಬಾವಿಯೊಳಗೆ ಗ್ರಾಪಂ ವತಿಯಿಂದಲೇ ಬೋರ್‌ವೆಲ್ ಕೊರೆದುಕೊಡುವುದು, ಅವರು ಆಪೇಕ್ಷಿಸಿದಲ್ಲಿ ಯಾವುದೇ ಶುಲ್ಕವಿಲ್ಲದೆ ಬೋರ್‌ವೆಲ್‌ನಿಂದ ಅವರಿಗೂ ನೀರು ಸಂಪರ್ಕ ಕಲ್ಪಿಸುವುದು ಹಾಗೂ ಇಲ್ಲಿಂದ ಜೆಎನ್ ನಗರ ಮತ್ತು ಕಜಕೋಡೆ ವ್ಯಾಪ್ತಿಗೆ ಮಾತ್ರ ನೀರು ಕೊಡುವ ಒಪ್ಪಂದ ಮಾಡಿಕೊಂಡು ಬಳಿಕ ಇದನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಣಯ ಮಾಡುವ ಭರವಸೆ ನೀಡಲಾಯಿತು.
ಈ ವೇಳೆ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಹಾಗೂ ಕಾರ್ಯ ಕರ್ತರು ಅಲ್ಲಿಗೆ ಆಗಮಿಸಿರುವ ವಿಚಾರದಲ್ಲಿ ಆಕ್ಷೇಪ ವ್ಯಕ್ತವಾಗಿ ಎರಡು ಪಕ್ಷಗಳ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆಯಿತು.
ರಾಜು ಮಾಸ್ಟರ್ ಆಕ್ಷೇಪ ಹಿಂಪಡೆದಿರುವುದನ್ನು ಲಿಖಿತವಾಗಿ ನೀಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ವಾರದೊಳಗೆ ನೀರು ಸರಬರಾಜು ಮಾಡದಿದ್ದಲ್ಲಿ ಮತ್ತೆ ಪಂಚಾಯತ್‌ಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಲಾಯಿತು.
ಕೊಳವೆ ಬಾವಿ ಸಮಸ್ಯೆ ಬಗೆಹರಿಯದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.