×
Ad

ಕೊಣಾಜೆ: ಹಾಜಬ್ಬರ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

Update: 2017-02-22 18:59 IST

ಕೊಣಾಜೆ, ಫೆ.22: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಇದರ ವತಿಯಿಂದ ಹರೇಕಳ ನ್ಯೂಪಡ್ಪುವಿನ ಹಾಜಬ್ಬರ ಸರಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕಗಳನ್ನು ವೈದ್ಯರಾದ ಡಾ.ಮುರಳೀ  ಮೋಹನ ಚೂಂತಾರು ಅವರು ಬುಧವಾರ ವಿತರಿಸಿದರು.

ವಿಜ್ಞಾನ, ಸಾಮನ್ಯ ಜ್ಞಾನ, ಪದಕೋಶ ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸುಮಾರು ನೂರೈವತ್ತು ಪುಸ್ತಕಗಳನ್ನು ಚೂಂತಾರು ಅವರು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂತರವಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ನಮಗೆ ಜ್ಞಾನ ಕೌಶಲ್ಯವನ್ನು ವೃದ್ಧಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನ್ಯೂಪಡ್ಪುವಿನಲ್ಲಿರುವ ಸರಕಾರಿ ಶಾಲೆಯು ಅಕ್ಷರ ಸಂತ ಹರೇಕಳ ಹಾಜಬ್ಬರ ಕನಸಿನ ಕೂಸಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸದೊಂದಿಗೆ ಮುನ್ನಡೆದು ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಪಾಲಕರಿಗೆ ಹಾಗೂ ಶಾಲೆಗೂ ಕೀರ್ತಿ ತರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವಂತೆ ಈಗಾಗಲೇ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ವಿವಿಧ ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು, ವಿದ್ಯಾರ್ಥಿಗಳು ನಮ್ಮ ದೇಶದ ಶಕ್ತಿಯಾಗಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಜ್ಞಾನ ಸಂಪತ್‌ಭರಿತರನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಡಾ.ಮುರಳೀ ಮೋಹನ್ ಚೂಂತಾರ್ ಅವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಮಾಡಿ ಸಹಕರಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ರೂಪಾ ಎಂ.ಪಿ, ಶಿಕ್ಷಕಿಯರಾದ ಸುರೇಖ, ಜೋವಿತಾ ಎಸ್.ಆರ್, ಅನುರಾಧ ಎಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News