ಸಾಂಪ್ರದಾಯಿಕ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ನೀಡಿದ ಕೊಡುಗೆ ಅನನ್ಯ :ಡಾ. ಕೆ.ಆರ್. ಚಂದ್ರಶೇಖರ್
ಸುಳ್ಯ, ಫೆ.22: ಮಾನವನ ಜೀವನ ಆರಂಭವಾದಂದಿನಿಂದ ಸಾಂಪ್ರಾದಾಯಿಕ ವಿಜ್ಞಾನ ಆರಂಭಗೊಂಡಿದೆ. ಸಂಸ್ಕೃತಿ ಬೆಳವಣಿಗೆ ಆದಂತೆ ಈ ವಿಜ್ಞಾನವು ಅಭಿವೃದ್ಧಿ ಹೊಂದುತ್ತಾ ಜೀವ ಸಂಕುಲದ ಕೊಂಡಿಯಾಗಿ ಬೆಳವಣಿಗೆ ಆಗಿದೆ. ಸಾಂಪ್ರದಾಯಿಕ ವಿಜ್ಞಾನವು ಆಧುನಿಕ ವಿಜ್ಞಾನಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಆರ್. ಚಂದ್ರಶೇಖರ್ ಹೇಳಿದರು.
ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಇದರ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ ವನಶ್ರೀ ಇವುಗಳ ಸಂಯೋಜಕತ್ವದಲ್ಲಿ ಸಾಂಪ್ರದಾಯಿಕ ವಿಜ್ಞಾನ ಎಂಬ ವಿಷಯದ ಬಗ್ಗೆ ಬುಧವಾರ ನಡೆದ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜೀವನ ವಿಧಾನದಲ್ಲಿ ಪಾರಂಪರಿಕ ಜ್ಞಾನ ಹೇರಳವಾಗಿದೆ. ಅನುಭವಾಧಾರಿತ ಜ್ಞಾನ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯ ಮೂಲಕ ವೈಜ್ಞಾನಿಕ ಅಭಿವೃದ್ಧಿಯಲ್ಲಿ ಅವುಗಳ ಸಮರ್ಪಕ ಬಳಕೆಗೆ ಇನ್ನೂ ಅವಕಾಶಗಳಿವೆ. ಪ್ರಸ್ತುತ ವಿಜ್ಞಾನ ವಿಭಾಗಗಳಾದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಆಯುರ್ವೇದ ಹಾಗೂ ಇನ್ನಿತರ ವಿಷಯಗಳಲ್ಲಿ ಸಾಂಪ್ರದಾಯಿಕ ವಿಜ್ಞಾನದ ಮೌಲ್ಯಗಳ ಬಗ್ಗೆ ಚರ್ಚಿಸಲು ಹಲವು ವಿಷಯಗಳಿವೆ. ಸಾಂಪ್ರಾದಾಯಿಕ ವಜ್ಞಾನದ ಬದಲು ಅದೊಂದು ಸಂಸ್ಕೃತಿ ಆಗಿದೆ. ಮೌಲ್ಯಯುತವಾದ ಸಸ್ಯಸಂಪತ್ತು ನಾಶದ ಹಂಚಿಗೆ ಬಂದು ತಲುಪಿದೆ. ಪಾಶ್ಚಿಮಾತ್ಯ ಸಮಾಜದ ನಾಗರಿಕತೆಯಿಂದ ಇಂದಿನ ಆಧುನಿಕ ವಿಜ್ಞಾನದ ವರೆಗೆ ಸಂಪ್ರಾದಾಯಿಕ ವಿಜ್ಞಾನ ಮೌಲ್ಯ ಕಳೆದುಕೊಂಡಿಲ್ಲ. ಇದು ಹೊಸ ಅವಿಷ್ಕಾರಕ್ಕೆ ಬುನಾದಿಯಾಗುತ್ತದೆ. ಮುಂದಿನ ಜನಾಂಗದ ಬೆಳವಣಿಗೆಗೆ ಸಹಕಾರಿಯಾಗುವಂತಹ ಉತ್ತಮ ಪರಿಸರದ ಸಮಾಜ ಸೃಷ್ಟಿಯಾಗಬೇಕು ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅಧ್ಯಕ್ಷತೆಯನ್ನು ವಹಿಸಿದರು.
ಪ್ರಥಮ ಗೋಷ್ಠಿಯಲ್ಲಿ ಸರಕಾರಿ ಸ್ವಾಯತ್ತ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕರ ಭಂಡಾರಿಯವರು 'ಸಾಂಪ್ರದಾಯಿಕ ವಿಜ್ಞಾನ - ಪ್ರಸ್ತುತ ಮತ್ತು ಭವಿಷ್ಯದ ನಿರೀಕ್ಷೆಗಳು' ಎಂಬ ವಿಷಯವಾಗಿ, ದ್ವಿತೀಯ ಗೋಷ್ಠಿಯಲ್ಲಿ 'ಔಷದೀಯ ಕ್ಷೇತ್ರದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ವಿಜ್ಞಾನದ ಪಾತ್ರ' ಎಂಬ ವಿಷಯವಾಗಿ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಗುರುಶಂಕರ ಪಿ ಇವರು ವಿಚಾರ ಮಂಡಿಸಿದರು.
ಅಪರಾಹ್ನದ ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಕೆ. ಸರೋಜಿನಿಯವರು ಸಾಂಪ್ರದಾಯಿಕ ವಿಜ್ಞಾನದಲ್ಲಿ ಸಂಶೋಧನಾ ಸಾಧ್ಯತೆಗಳು ಎಂಬ ವಿಷಯದಲ್ಲಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಕುಲದೀಪ್ ಪೆಲ್ತಡ್ಕ, ಕಾಲೇಜಿನ ಉಪನ್ಯಾಸಕ ಡಾ. ಪೂವಪ್ಪ ಕಣಿಯೂರು, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಡಾ. ಶಕೀರಾ ಜಬೀನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೋ. ಗಿರೀಧರ ಗೌಡ ಸ್ವಾಗತಿಸಿ, ವನಶ್ರೀ ವಿ.ವಿಯ ಕಾರ್ಯದರ್ಶಿ ಡಾಶೋಭಾ ವಂದಿಸಿದರು. ಪ್ರಣೀತಾ ಮತ್ತು ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.